ವೆಸ್ಟ್​ ಇಂಡೀಸ್​ ತಂಡದಿಂದ ವೇಗಿ ಅಲ್ಜಾರಿ ಜೋಸೆಫ್ ಬ್ಯಾನ್​! ನಿಷೇಧ ವಿಧಿಸಿದ ಮ್ಯಾನೇಜ್​ಮೆಂಟ್​​

ವಿಜಯವಾಣಿ (99)
Published on

ಬ್ರಿಡ್ಜ್​ಟೌನ್​: ಇಲ್ಲಿನ ಬ್ರಿಡ್ಜ್‌ಟೌನ್, ಬಾರ್ಬಡೋಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಫೀಲ್ಡ್ ಅದಲು-ಬದಲು ವಿಚಾರಕ್ಕೆ ಸಂಬಂಧಿಸಿದಂತೆ ವೆಸ್ಟ್​ ಇಂಡೀಸ್​ ಕ್ಯಾಪ್ಟನ್​ ಶಾಯ್ ಹೋಪ್ ಅವರೊಂದಿಗಿನ ಭಿನ್ನಾಭಿಪ್ರಾಯಕ್ಕಾಗಿ ತಂಡದ ಸ್ಟಾರ್​ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಇದೀಗ ಕೆರಿಬಿಯನ್​ ಕ್ರಿಕೆಟ್​ ಮ್ಯಾನೇಜ್​ಮೆಂಟ್ ​ತಂಡದಿಂದ ಬ್ಯಾನ್ ಮಾಡಿದೆ.

ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳಲು ಕೆರಿಬಿಯನ್ ಪಡೆ ಭಾರೀ ಪೈಪೋಟಿಗೆ ಇಳಿದಿತ್ತು. ಈ ವೇಳೆ ಬುಧವಾರ (ನ.06) ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಮೈದಾನದಲ್ಲೇ ಟೀಮ್​ ಕ್ಯಾಪ್ಟನ್​ ಶಾಯ್​ ಅವರೊಂದಿಗೆ ಜೋಸೆಫ್​ ವಾಗ್ವಾದಕ್ಕಿಳಿದರು. ಕೆಲ ಕಾಲ ತೀವ್ರ ಜಟಾಪಟಿ ನಡೆಸಿದ ಅವರಿಗೆ ಅಂಪೈರ್​ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ದೇ ಆದರೂ ಆಲ್ಜಾರಿ ಮಾತ್ರ ಮಾತಿಗೆ ಲಗಾಮು ಹಾಕಲಿಲ್ಲ. ಇದು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಗೊಂದಲ ಮೂಡಿಸಿತು.

"ಅಲ್ಜಾರಿ ಅವರ ನಡವಳಿಕೆಯು ವೆಸ್ಟ್ ಇಂಡೀಸ್ ಕ್ರಿಕೆಟ್​ ಎತ್ತಿಹಿಡಿಯುವ ಪ್ರಮುಖ ಮೌಲ್ಯಗಳೊಂದಿಗೆ ಹೊಂದಿಕೆಯಾಗಿಲ್ಲ. ಇದು ತಪ್ಪು. ಈ ರೀತಿಯ ನಡವಳಿಕೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ಅದಕ್ಕೆ ಸೂಕ್ತ ಕ್ರಮವನ್ನು ನಾವು ಜರುಗಿಸಲೇಬೇಕು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧ ಸರಣಿಯ ಎರಡು ಪಂದ್ಯಗಳಿಂದ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಅಮಾನತುಗೊಳಿಸಿದ್ದೇವೆ" ಎಂದು ವೆಸ್ಟ್​ ಇಂಡೀಸ್ ಕ್ರಿಕೆಟ್‌ನ ನಿರ್ದೇಶಕರಾದ ಮೈಲ್ಸ್ ಬಾಸ್ಕೊಂಬೆ ತಿಳಿಸಿದ್ದಾರೆ. ತನ್ನ ನಡೆಯಿಂದ ತಂಡಕ್ಕೆ ಕಪ್ಪುಚುಕ್ಕೆ ನೀಡಿದಂತಾಯಿತು ಎಂದು ಬೇಸರ ಹೊರಹಾಕಿದ ಜೋಸೆಫ್​​, ಈ ಕುರಿತು ಮ್ಯಾನೇಜ್​ಮೆಂಟ್​ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net