ಸಂಬಳ ಬೇಡ, ಯಾವುದಾದ್ರೂ ಕೆಲಸ ಕೊಡಿ ಸಾಕು! ಯುವತಿಯ ಹೇಳಿಕೆ ಹಿಂದಿದೆ ಈ ಶಾಕಿಂಗ್ ಕಾರಣ

ವಿಜಯವಾಣಿ (98)
Published on

ಲಂಡನ್​: ವಿದೇಶದಲ್ಲಿ ತಮ್ಮ ಪದವಿ ಅಥವಾ ಸ್ನಾತಕೋತರ ಪದವಿ ಪಡೆಯುವ ಹಂಬಲ ಅನೇಕ ವಿದ್ಯಾರ್ಥಿಗಳದ್ದು. ಈ ವಿಷಯ ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಉತ್ತಮ ಕೋರ್ಸ್​ಗಳನ್ನು ಅರಸಿ, ದೇಶ ತೊರೆಯುವ ಯುವಕ-ಯುವತಿಯರು, ತಮಗೆ ವಿಧಿಸಲಾದ ವರ್ಷಗಳ ವ್ಯಾಸಂಗದ ನಂತರ ಅದೇ ದೇಶದಲ್ಲಿ ಕೆಲಸ ಹುಡುಕಿಕೊಂಡು ಜೀವನ ಸಾಗಿಸಲು ಬಯಸುತ್ತಾರೆ. ಕೆಲವರ ವಿಸಾದ ಅವಧಿ ವಿಸ್ತರಣೆ ಆಗುವ ಸಾಧ್ಯತೆಗಳಿರುತ್ತದೆ. ಇದರ ನವೀಕರಣಕ್ಕೆ ದುಬಾರಿ ಮೊತ್ತದ ಹಣ ವ್ಯಯಿಸಲು ಒಂದಷ್ಟು ಮಂದಿಯ ಬಳಿ ಹಣವಿರುವುದಿಲ್ಲ. ಸಾಲ-ಸೋಲ ಮಾಡಿ ದೇಶಬಿಟ್ಟು ಬರುವಾಗ ತಮ್ಮ ಜತೆಗೆ ತಂದ ದುಡ್ಡನ್ನು ಹೊರತುಪಡಿಸಿದರೆ, ನವೀಕರಣಕ್ಕೆ ಅಗತ್ಯವಿರುವ ಹಣ ಹೊಂದಿಸುವುದು ಅವರಿಂದ ಕಷ್ಟಸಾಧ್ಯ. ಸದ್ಯ ಇಲ್ಲೊಬ್ಬರು ಯುವತಿ, ತಮಗೆ ಯಾವುದಾದರೂ ಒಂದು ಕೆಲಸ ಕೊಡಿ ಸಾಕು, ಸಂಬಳ ಬೇಕಿಲ್ಲ ಎಂದು ಪ್ರತಿಷ್ಠಿತ ಸಂಸ್ಥೆಗಳಿಗೆ ಮನವಿ ಮಾಡಿರುವ ಪೋಸ್ಟ್​ ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಂಎಸ್ಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್

ನನಗೆ ಉದ್ಯೋಗ ಕೊಡಿ, ಸಂಬಳವಿಲ್ಲದೆ ಕೆಲಸ ಮಾಡುತ್ತೇನೆ ಎಂದು ಸಂಸ್ಥೆಗಳಿಗೆ ಮನವಿ ಮಾಡಿರುವ ಯುವತಿಯ ಹೆಸರು ಶ್ವೇತಾ ಕೋತಂಡನ್. ತನ್ನ ವಿದ್ಯಾಭ್ಯಾಸಕ್ಕಾಗಿ ಯುಕೆಗೆ ಹೋಗಿರುವ ಈಕೆ, ಲೀಸೆಸ್ಟರ್ ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಇವರ ವೀಸಾ ಇನ್ನೂ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಯುಕೆಯಲ್ಲಿಯೇ ವಾಸ್ತವ್ಯ ಹೂಡಲು ನಿರ್ಧರಿಸುವ ಈಕೆ, ಇಂತಹದ್ದೇ ಅಂತ ಹೇಳ್ತಿಲ್ಲ, ಯಾವುದಾದರೂ ಒಂದು ಉದ್ಯೋಗ ಕೊಡಿ, ಸಂಬಳ ಬೇಕಿಲ್ಲ. ನಾನು ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ವೀಸಾ ನೀಡಲು ಮುಂದೆ ಬಂದಿಲ್ಲ

ಈ ಬಗ್ಗೆ ತನ್ನ ಲಿಂಕ್ಡ್​ಇನ್​ ಖಾತೆಯಲ್ಲಿ ಬರೆದು, ಹಂಚಿಕೊಂಡಿರುವ ಶ್ವೇತಾ, "ದಿನಕ್ಕೆ ಹನ್ನೆರಡು ಗಂಟೆ, ವಾರದ ಏಳು ದಿನ ಕೆಲಸ ಮಾಡಲು ಸಿದ್ಧಳಿದ್ದೇನೆ. ಇದುವರೆಗೆ 300 ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದರೂ ಸಹ ಒಂದೇ ಒಂದು ಕಂಪನಿಯೂ ವೀಸಾ ನೀಡಲು ಮುಂದೆ ಬಂದಿಲ್ಲ. ವೀಸಾ ನೀಡುವ ಕಂಪನಿಯಲ್ಲಿ ಉಚಿತವಾಗಿ ಕೆಲಸ ಮಾಡಲು ನಾನು ತಯಾರಿದ್ದೇನೆ" ಎಂದು ಆಕೆ ಬರೆದುಕೊಂಡಿದ್ದಾರೆ. ಪ್ರಸ್ತುತ ವೀಸಾ ಪ್ರಾಯೋಜಿತ ಡಿಸೈನರ್​ ಇಂಜಿನಿಯರ್ ಉದ್ಯೋಗಗಳಿಗಾಗಿ ಹುಡುಕುತ್ತಿದ್ದೇನೆ. ನನ್ನ ಕೆಲಸದ ವಿಧಾನವನ್ನು ಗಮನಿಸಿ, ಒಂದು ತಿಂಗಳು ಸಂಬಳ ತೆಗೆದುಕೊಳ್ಳದೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಕನಸ್ಸಿಗೆ ಕತ್ತರಿ

ಸದ್ಯ ಈಕೆಯ ಪೋಸ್ಟ್​ ನೋಡಿದ ಅನೇಕರು ಉದ್ಯೋಗದ ಸಲುವಾಗಿ ತಮ್ಮ ದೇಶ ತೊರೆದು ವಿದೇಶಕ್ಕೆ ಬರುವವರಿಗೆ ಇಲ್ಲಿ ಉದ್ಯೋಗದ ಸಮಸ್ಯೆ ಎದುರಾಗುವುದು ಇದೀಗ ಉಳಿದವರ ಕನಸ್ಸಿಗೆ ಕತ್ತರಿ ಹಾಕಿದಂತಿದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಿದರೆ, ದೊಡ್ಡ ದೊಡ್ಡ ಹುದ್ದೆಗೆ ಅವಕಾಶಗಳು ಸಿಗುತ್ತವೆ ಎಂದು ಅಪಾರ ಕನಸು ಕಾಣುತ್ತಿದ್ದವರಿಗೆ ಈಕೆಯ ಪೋಸ್ಟ್​ ನಿಜಕ್ಕೂ ಭಾರೀ ಅಚ್ಚರಿ ಮೂಡಿಸಿದೆ ಎಂದರೆ ಖಂಡಿತ ತಪ್ಪಾಗಲಾರದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net