

Jasprit Bumrah : ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಮನಸಾರೆ ಹೊಗಳಿದ್ದಾರೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಾಲ್ಕು ಪಂದ್ಯಗಳಲ್ಲಿ 30 ವಿಕೆಟ್ ಕಬಳಿಸಿರುವ ಬುಮ್ರಾ ವಿರುದ್ಧ ಇನ್ಮುಂದೆ ಎಡಗೈಯಲ್ಲಿ ಬೌಲಿಂಗ್ ಮಾಡುವಂತೆ ಕಾನೂನು ತರಲಾಗುವುದು ಎಂದು ಅಲ್ಬನೀಸ್ ತಮಾಷೆ ಮಾಡಿದ್ದಾರೆ.
ಶುಕ್ರವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ಗೆ ಮುಂಚಿತವಾಗಿ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಬುಧವಾರ ಎರಡೂ ತಂಡಗಳ ಆಟಗಾರರಿಗೆ ಪಾರ್ಟಿ ಆಯೋಜನೆ ಮಾಡಿದ್ದರು.
ಈ ವೇಳೆ ಮಾತನಾಡಿದ ಆಲ್ಬನೀಸ್, ಬುಮ್ರಾ ತನ್ನ ಎಡಗೈಯಿಂದ ಬೌಲಿಂಗ್ ಮಾಡಬೇಕು ಅಥವಾ ಆಫ್ ಒನ್ ಸ್ಟೆಪ್ನಲ್ಲಿ ಬೌಲಿಂಗ್ ಮಾಡುವ ಈ ನಿಟ್ಟಿನಲ್ಲಿ ಕಾನೂನು ತರುತ್ತೇವೆ. ಅವರು ಪ್ರತಿ ಬಾರಿಯೂ ಬೌಲ್ ಮಾಡುವುದನ್ನು ನೋಡುವುದು ತುಂಬಾ ಆಸಕ್ತಿದಾಯಕವಾಗಿದೆ ಎಂದು ಹೇಳಿದರು.
ಇನ್ನು ಶುಕ್ರವಾರದಿಂದ ಅಂತಿಮ ಟೆಸ್ಟ್ ಪ್ರಾರಂಭವಾಗುತ್ತದೆ. ಮೆಕ್ಗ್ರಾತ್ ಫೌಂಡೇಶನ್ನ ಪ್ರಯತ್ನದಿಂದ ಸಿಡ್ನಿ ಮೈದಾನವು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಎಂದು ಇದೇ ವೇಳೆ ಅಲ್ಬನೀಸ್ ಹೇಳಿದರು. ಆಸ್ಟ್ರೇಲಿಯಾದ ಮಾಜಿ ವೇಗಿ ಮೆಕ್ಗ್ರಾತ್ ಅವರ ಪತ್ನಿ ಸ್ತನ ಕ್ಯಾನ್ಸರ್ನಿಂದ 2008 ರಲ್ಲಿ ನಿಧನರಾದರು. ಅಂದಿನಿಂದ, ಮೆಕ್ಗ್ರಾತ್ ತನ್ನ ಫೌಂಡೇಶನ್ ಪರವಾಗಿ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂತಿಮ ಟೆಸ್ಟ್ನಲ್ಲಿ ಪಿಂಕ್ ಕ್ಯಾಪ್ ಧರಿಸಿ ಮೈದಾನಕ್ಕಿಳಿಯಲಿವೆ.
ಆಸ್ಟ್ರೇಲಿಯಾ ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಮುಖ್ಯ ಕೋಚ್ ಗಂಭೀರ್, ಆಸ್ಟ್ರೇಲಿಯಾ ಒಂದು ಸುಂದರ ದೇಶ. ಆದರೆ, ಇಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟ. ಅಭಿಮಾನಿಗಳಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ. ಸರಣಿಯಲ್ಲಿ ಇನ್ನೂ ಒಂದು ಟೆಸ್ಟ್ ಬಾಕಿ ಇದೆ. ಇದರಲ್ಲಿಯೂ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸುತ್ತೇವೆ ಎಂದರು.
ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿ, ಮೆಲ್ಬೋರ್ನ್ ಟೆಸ್ಟ್ ಅನ್ನು ನಾವು ಎಂದಿಗೂ ಮರೆಯುವುದಿಲ್ಲ. ಐದು ದಿನಗಳ ಕಾಲ ನಡೆದ ಹೋರಾಟದ ನಂತರ ಸಿಕ್ಕ ಗೆಲುವು ತೃಪ್ತಿ ತಂದಿದೆ. ಸರಣಿ ಗೆಲ್ಲುವ ಗುರಿಯೊಂದಿಗೆ ನಾವು ಅಂತಿಮ ಟೆಸ್ಟ್ಗೆ ಪ್ರವೇಶಿಸುತ್ತೇವೆ ಎಂದು ತಿಳಿಸಿದರು. (ಏಜೆನ್ಸೀಸ್)