ಕಿಡ್ನಿಯ ಆರೋಗ್ಯ ಕಾಪಾಡುವ ಆಹಾರಗಳಿವು... ನಿಮ್ಮ ನಿತ್ಯದ ಊಟದಲ್ಲಿ ಇವುಗಳನ್ನು ಮಿಸ್​ ಮಾಡ್ಬೇಡಿ! Kidneys Health

Kidneys Health
Published on

Kidneys Health : ಮೂತ್ರಪಿಂಡಗಳು ಅಥವಾ ಕಿಡ್ನಿಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ರಕ್ತ ಶುದ್ಧೀಕರಣ ಮತ್ತು ತ್ಯಾಜ್ಯವನ್ನು ಹೊರ ಹಾಕುವ ಕೆಲಸವನ್ನು ಮಾಡುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ದೇಹದ ಇತರ ಅಂಗಗಳು ಉತ್ತಮವಾಗಿರುತ್ತದೆ. ಇಲ್ಲದೇ ಹೋದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ನಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಮೂತ್ರಪಿಂಡಗಳ ಪಾತ್ರ ಬಹಳ ಮುಖ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದಾಗಿ ದೇಹದಲ್ಲಿ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿದೆ. ಇದೇನಾದರೂ ಮಿತಿ ಮೀರಿದರೆ, ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಆರೋಗ್ಯಕರ ಜೀವನಕ್ಕಾಗಿ ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುವುದು ಬಹಳ ಮುಖ್ಯ. ದೇಹದಿಂದ ವಿಷವನ್ನು ತೆಗೆದುಹಾಕಲು ಆರೋಗ್ಯಕರ ಮೂತ್ರಪಿಂಡಗಳು ಅವಶ್ಯಕ. ಮೂತ್ರಪಿಂಡಗಳು ನಮ್ಮ ರಕ್ತವನ್ನು ಶುದ್ಧೀಕರಿಸುತ್ತವೆ, ರಕ್ತದಲ್ಲಿ ಸಂಗ್ರಹವಾಗುವ ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡುತ್ತವೆ ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮೂತ್ರಪಿಂಡಗಳನ್ನು ಆರೋಗ್ಯವಾಗಿಡುವುದು ಮುಖ್ಯವಾಗಿದೆ.

ಮೂತ್ರಪಿಂಡಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೀನು (ಸಾಲ್ಮೋನ್, ಟ್ಯೂನಾ ಮೀನು)

ಈ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವು ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸಿ ರಕ್ತ ಸಂಚಾರದಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯುತ್ತದೆ. ಇದರ ಪರಿಣಾಮ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮೂತ್ರಪಿಂಡಗಳು ಆರೋಗ್ಯಕರವಾಗಿ ಇರುತ್ತವೆ.

ಸೇಬು

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂದು ಹೇಳಲಾಗುತ್ತದೆ. 100 ಗ್ರಾಂ ಸೇಬಿನಲ್ಲಿ 2.4 ಗ್ರಾಂ ಫೈಬರ್ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್​ಗಳು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಎಲೆಕೋಸು

ಎಲೆಕೋಸು ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಪೊಟ್ಯಾಸಿಯಂ ಅನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಧಿಕವಾಗಿದೆ. ಎಲೆಕೋಸನ್ನು ಸಲಾಡ್‌ಗಳಲ್ಲಿ ತಿನ್ನಬಹುದು, ಸ್ಯಾಂಡ್‌ವಿಚ್‌ಗಳಿಗೆ ಸೇರಿಸಬಹುದು ಅಥವಾ ಸಾಂಬಾರಿನಲ್ಲಿ ಬಳಸಬಹುದು.

ಆಲಿವ್ ಎಣ್ಣೆ

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುವುದಲ್ಲದೆ, ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ.

ಬೆಳ್ಳುಳ್ಳಿ

ಇದರಲ್ಲಿರುವ ಅಲಿಸಿನ್ ಎಂಬ ವಸ್ತು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಮೂತ್ರಪಿಂಡಗಳಿಗೆ ಆರೋಗ್ಯವನ್ನು ಒದಗಿಸುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಲು ಮರೆಯಬೇಡಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net