ಭಾರತ ವಿರುದ್ಧ 3ನೇ ಟೆಸ್ಟ್​ನಲ್ಲಿ ಇನ್ನಷ್ಟು ಆಕ್ರಮಣ: ಇಂಗ್ಲೆಂಡ್​ ಕೋಚ್​ ಮೆಕ್ಕಲಂ ಎಚ್ಚರಿಕೆ!

mecclum web
Published on

ನವದೆಹಲಿ: ಆಕ್ರಮಣಕಾರಿ ಬಾಜ್​ಬಾಲ್​ ತಂತ್ರಗಾರಿಕೆಯ ಮೂಲಕ ಭಾರತ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಗೆದ್ದು ಬೀಗಿದ್ದ ಇಂಗ್ಲೆಂಡ್​ ತಂಡ 2ನೇ ಟೆಸ್ಟ್​ನಲ್ಲಿ ಆತಿಥೇಯರ ತಿರುಗೇಟಿಗೆ ಶರಣಾಗಿದೆ. ಇದೀಗ ಮೂರನೇ ಟೆಸ್ಟ್​ ವೇಳೆಗೆ ಬಾಜ್​ಬಾಲ್​ ತಂತ್ರಗಾರಿಕೆಯಲ್ಲಿ ಇನ್ನಷ್ಟು ಆಕ್ರಮಣವನ್ನು ತುಂಬವ ಎಚ್ಚರಿಕೆಯನ್ನು ಇಂಗ್ಲೆಂಡ್​ ಕೋಚ್​ ಬ್ರೆಂಡನ್​ ಮೆಕ್ಕಲಂ ನೀಡಿದ್ದಾರೆ.

ವಿಶಾಖಪಟ್ಟಣದಲ್ಲಿ ಸೋಮವಾರ 2ನೇ ಟೆಸ್ಟ್​ ಮುಗಿದ ಬೆನ್ನಲ್ಲೇ ಇಂಗ್ಲೆಂಡ್​ ತಂಡ ವಿಶ್ರಾಂತಿಗಾಗಿ ಅಬುಧಾಬಿಗೆ ಹಾರಿದ್ದು, ಫೆಬ್ರವರಿ 15ರಿಂದ ರಾಜ್​ಕೋಟ್​ನಲ್ಲಿ ನಡೆಯಲಿರುವ 3ನೇ ಟೆಸ್ಟ್​ಗೆ ಮುನ್ನ ಫೆಬ್ರವರಿ 12ರಂದು ಭಾರತಕ್ಕೆ ಮರಳಲಿದೆ. ಅಬುಧಾಬಿಯಲ್ಲಿ ಇಂಗ್ಲೆಂಡ್​ ಆಟಗಾರರು ಯಾವುದೇ ಅಭ್ಯಾಸ ನಡೆಸುವುದಿಲ್ಲ. ಹೀಗಾಗಿ ಅವರು ತಮ್ಮ ಕ್ರಿಕೆಟ್​ ಕಿಟ್​ ಕೂಡ ತೆಗೆದುಕೊಂಡು ಹೋಗಿಲ್ಲ ಎನ್ನಲಾಗಿದೆ.

"ಸರಣಿ ಈಗ 1-1 ಸಮಬಲದಲ್ಲಿದೆ. ಹೀಗಾಗಿ ನಾವಿನ್ನೂ ಸ್ಪರ್ಧೆಯಲ್ಲಿರುವುದನ್ನು ಇದು ತೋರಿಸುತ್ತಿದೆ. ಕಳೆದೆರಡು ಟೆಸ್ಟ್​ಗಳಲ್ಲಿ ನಾವು ಉತ್ತಮ ಆಟವನ್ನೇ ಆಡಿದ್ದೇವೆ. ಸರಣಿಯಲ್ಲಿ ಇನ್ನೂ 3 ಪಂದ್ಯಗಳಿದ್ದು, ನಮ್ಮ ರನ್​ಗಳಿಕೆಯ ವೇಗ ಇನ್ನಷ್ಟು ಹೆಚ್ಚಬಹುದು' ಎಂದು ಮೆಕ್ಕಲಂ ಹೇಳಿದ್ದಾರೆ.

ಲಾರೆನ್ಸ್​ ಐಎಲ್​ಟಿ20ಯಲ್ಲಿ ಕಣಕ್ಕೆ

ಇಂಗ್ಲೆಂಡ್​ ತಂಡ ಬ್ಯಾಟರ್​ ಡೇನ್​ ಲಾರೆನ್ಸ್​ ಮಾತ್ರ ಈ ಬಿಡುವಿನ ಅವಧಿಯಲ್ಲಿ ಅಬುಧಾಬಿಯಲ್ಲಿ ಇಂಟರ್​ನ್ಯಾಷನಲ್​ ಲೀಗ್​ ಟಿ20 (ಐಎಲ್​ಟಿ20) ಟೂರ್ನಿಯಲ್ಲಿ ಡೆಸರ್ಟ್​ ವೈಪರ್ಸ್​ ಪರ 2 ಪಂದ್ಯಗಳನ್ನು ಆಡಲಿದ್ದಾರೆ. ಹ್ಯಾರಿ ಬ್ರೂಕ್​ ಪ್ರವಾಸದಿಂದ ದಿಢೀರ್​ ಹೊರಗುಳಿದಾಗ ಲಾರೆನ್ಸ್​ ಕೊನೇಕ್ಷಣದಲ್ಲಿ ಇಂಗ್ಲೆಂಡ್​ ತಂಡ ಸೇರಿದ್ದರು. ಹೀಗಾಗಿ ಅವರು ಐಎಲ್​ಟಿ20ಯಲ್ಲಿ ಆಡುವ ಒಪ್ಪಂದವನ್ನು ಬ್ರೇಕ್​ಮಾಡಿ ಭಾರತಕ್ಕೆ ಆಗಮಿಸಿದ್ದರು.

ಬಾಜ್​ಬಾಲ್​ಗೆ ಬಾಯ್ಕಾಟ್​ ಟೀಕೆ

ಮೆಕ್ಕಲಂ-ಸ್ಟೋಕ್ಸ್​ ಟೀಮ್​ನ ಬಾಜ್​ಬಾಲ್​ ತಂತ್ರಗಾರಿಕೆಗೆ ಇಂಗ್ಲೆಂಡ್​ ಮಾಜಿ ನಾಯಕ ಹಾಗೂ ವಿಶ್ಲೇಷಕ ಜೆಫ್ರಿ ಬಾಯ್ಕಾಟ್​ರಿಂದ ಟೀಕೆ ವ್ಯಕ್ತವಾಗಿದೆ. ಓವರ್​ಗೆ 5ರಂತೆ ರನ್​ ಗಳಿಸುವುದು ಟೆಸ್ಟ್​ ಕ್ರಿಕೆಟ್​ನಲ್ಲೂ ಮನರಂಜನೆ ಒದಗಿಸಬಹುದಾದರೂ, ಅದರಿಂದ ಬ್ಯಾಟರ್​ ಒಬ್ಬ ತನಗೆ ಸಿಕ್ಕ ಉತ್ತಮ ಆರಂಭದ ನಡುವೆಯೂ ವಿಕೆಟ್​ ಕೈಚೆಲ್ಲಬಹುದು. ಬಾಜ್​ಬಾಲ್​ನಿಂದ ಜೋ ರೂಟ್​ ವಿಕೆಟ್​ ನಷ್ಟವಾಗುತ್ತಿದೆ. ಅವರ ತಲೆಯಲ್ಲಿ ಟಿ20 ಕ್ರಿಕೆಟ್​ ಇದ್ದಂತಿದೆ. ಹೀಗಾಗಿ ಸ್ವೀಪ್​, ರಿವರ್ಸ್​ ಸ್ವೀಪ್​ ಹೇಗಾದರೂ ಸರಿ ಪ್ರತಿ ಎಸೆತದಲ್ಲೂ ರನ್​ ಗಳಿಸಲು ಬಯಸುತ್ತಿದ್ದಾರೆ. ಆದರೆ ಆಕ್ರಮಣಕಾರಿ ಆಟಕ್ಕಿಂತ ಇನಿಂಗ್ಸ್​ ಕಟ್ಟುವುದು ಮುಖ್ಯವಾದುದು ಎಂದು ಬಾಯ್ಕಾಟ್​ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net