

ಬೆಂಗಳೂರು: ಇಡೀ ಜಾಗತಿಕ ಕ್ರೀಡಾಲೋಕವೇ ಕರೊನಾ ವೈರಸ್ನಿಂದ ಸ್ತಬ್ಧಗೊಂಡಿದ್ದರೆ, ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಮಾತ್ರ ಟೋಕಿಯೊ ಒಲಿಂಪಿಕ್ಸ್ಗೆ ಭರದ ಸಿದ್ಧತೆಯಲ್ಲಿ ತೊಡಗಿವೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತರಬೇತಿಯಲ್ಲಿ ನಿರತವಾಗಿವೆ.
ಮಾರ್ಚ್ ಮೊದಲ ವಾರದಿಂದಲೂ ಪುರುಷರ ತಂಡ ಅಭ್ಯಾಸ ನಡೆಸುತ್ತಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಜಪಾನ್ನಲ್ಲಿ ಅತಿಯಾದ ಬಿಸಿಲಿರುವ ಕಾರಣ ಭಾರತ ತಂಡಗಳು ಕೂಡ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬಿಸಿಲಿನಲ್ಲೇ ಅಭ್ಯಾಸಕೈಗೊಂಡಿವೆ. ಕೋವಿಡ್ -19ರ ಭಯ ಹೊರತುಪಡಿಸಿ ಬೆಂಗಳೂರಿನ ಬಿರು ಬೇಸಿಗೆಯ ಬಿಸಿಲು ಭಾರತ ತಂಡಗಳ ಅಭ್ಯಾಸಕ್ಕೆ ಪೂರಕವಾಗಿದೆ. ಭಾರತ ಪುರುಷರ ತಂಡದಲ್ಲಿರುವ ಏಕೈಕ ಕನ್ನಡಿಗ ಎಸ್ವಿ ಸುನೀಲ್, ತಂಡದ ಅಭ್ಯಾಸ ಹಾಗೂ ಕರೊನಾ ವೈರಸ್ ಕುರಿತು ಸೋಮವಾರ ‘ವಿಜಯವಾಣಿ’ಯೊಂದಿಗೆ ತಮ್ಮ ಮನದಾಳ ಹಂಚಿಕೊಂಡರು.
ಕರೊನಾ ವೈರಸ್ ಭೀತಿ ನಡುವೆಯೂ ಅಭ್ಯಾಸ ಕೈಗೊಂಡಿರುವುದು ಕಷ್ಟವಾಗುತ್ತಿಲ್ಲವೇ?
-ಹಾಗೆನಿಲ್ಲ. ಸಾಯ್ ಕೇಂದ್ರದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಗಳಿರುವುದರಿಂದ ಅಭ್ಯಾಸಕ್ಕೂ ಯಾವುದೇ ತೊಂದರೆಯಾಗಿಲ್ಲ. ನಮಗೆ ಅಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಇಡೀ ಸಾಯ್ ಕೇಂದ್ರವನ್ನೇ ಲಾಕ್ಡೌನ್ ಮಾಡಲಾಗಿದೆ. ನಾವೂ ಹೊರಹೋಗುವಂತಿಲ್ಲ. ಯಾರೂ ಇಲ್ಲಿಗೆ ಬರುವಂತಿಲ್ಲ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾಯ್ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಇದರ ಶ್ರೇಯ ಸಲ್ಲಬೇಕು. ನಮಗೂ ಇಲ್ಲಿ ಯಾವುದೇ ತೊಂದರೆಯಾಗಿಲ್ಲ.
ಅಭ್ಯಾಸಕ್ಕೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ?
-ಆಟಗಾರರಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ಸಾಯ್ ಎಷ್ಟೇ ನಿಗಾ ವಹಿಸಿದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದನ್ನು ಕಲಿಯಬೇಕು. ಇದು ತುಂಬಾ ಡೇಂಜರಸ್ ವೈರಸ್. ಇಡೀ ವಿಶ್ವವೇ ಇದರಿಂದ ತತ್ತರಿಸಿದೆ. ಜನ ಭಯಭೀತರಾಗಿದ್ದಾರೆ. ಕೋಚ್, ಸಿಬ್ಬಂದಿ ನೀಡುತ್ತಿರುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಯಾವ ಆಟಗಾರನೂ ಕ್ಯಾಂಪಸ್ ಬಿಟ್ಟು ತೆರಳುತ್ತಿಲ್ಲ. ನಾನು ಸ್ಥಳೀಯ, ನನ್ನ ಕುಟುಂಬ ಬೆಂಗಳೂರಿನಲ್ಲೇ ನೆಲೆಸಿದ್ದರೂ ಎರಡು ವಾರಗಳಿಂದ ನನ್ನ ಮಗಳನ್ನೂ ನೋಡಲು ಹೋಗಿಲ್ಲ. ನಾನೊಬ್ಬ ರಾಷ್ಟ್ರೀಯ ಆಟಗಾರನಾಗಿ ಇತರರಿಗೆ ಮಾದರಿಯಾಗಬೇಕು. ಹೀಗಾಗಿ ಅತ್ಯಂತ ಕಾಳಜಿ ವಹಿಸಲಾಗುತ್ತಿದೆ.
ಅಭ್ಯಾಸ ಹೇಗೆ ಸಾಗುತ್ತಿದೆ?
-ಒಲಿಂಪಿಕ್ಸ್ ವೇಳೆಯಲ್ಲಿ ಜಪಾನ್ನಲ್ಲಿ ತುಂಬಾ ಬಿಸಿಲು ಇರುತ್ತದೆ. ಹೀಗಾಗಿ ಪ್ರತಿದಿನ ಮಧ್ಯಾಹ್ನದ ನಂತರ ಅಭ್ಯಾಸ ಮಾಡುತ್ತಿದ್ದೇವೆ. ಬೆಳಗ್ಗೆ 9ರಿಂದ 10.30ರವರೆಗೆ ಅಭ್ಯಾಸದ ಕುರಿತು ಚರ್ಚೆ ಮಾಡುತ್ತೇವೆ. ಅಭ್ಯಾಸದ ಬಳಿಕ ಜಿಮ್ಲ್ಲಿ ಹೆಚ್ಚು ಹೊತ್ತು ಕಳೆಯುತ್ತೇವೆ. ದಿನಂಪ್ರತಿ ಇದೇ ರೀತಿ ಇರುತ್ತದೆ. ಈ ಬಾರಿ ಉತ್ತಮ ನಿರ್ವಹಣೆ ತೋರುವುದಷ್ಟೇ ನಮ್ಮ ಕೆಲಸ.
ತಂಡದ ಬಗ್ಗೆ ಏನು ಹೇಳುವಿರಿ?
-ಸಮತೋಲನದಿಂದ ಕೂಡಿದೆ. ತಂಡದ ಎಲ್ಲ ಆಟಗಾರರು ಉತ್ತಮ ಫಾಮರ್್ನಲ್ಲಿದ್ದಾರೆ. ಅದು ಒಂದು ಪ್ಲಸ್ ಪಾಯಿಂಟ್. ಆಟಗಾರರ ಮಧ್ಯೆ ಉತ್ತಮ ಹೊಂದಾಣಿಕೆ ಇದೆ. ನಮ್ಮದು ಶ್ರೇಷ್ಠ ತಂಡ ಎಂದು ಹೇಳಲು ಬಯಸುತ್ತೇನೆ.
ಜನತೆಗೆ ಎಸ್ವಿ ಸುನೀಲ್ ಮನವಿ
ಇದೊಂದು ಮಾರಕ ವೈರಸ್. ಇದಕ್ಕೆ ಭಯ ಪಡುವ ಬದಲು ಜಾಗ್ರತೆ ವಹಿಸುವುದು ಅಗತ್ಯ. ಸರ್ಕಾರ ಯಾವ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆಯೋ ಅದಕ್ಕೆ ಸೂಕ್ತವಾಗಿ ಜನರು ಸ್ಪಂದಿಸಬೇಕು. ಇದು ಕೇವಲ ಒಂದೆರಡು ದಿನಕ್ಕೆ ಹೋಗುವ ವೈರಸ್ ಅಲ್ಲ. ವಾರಗಟ್ಟಲೇ ಮನೆಯಲ್ಲೆ ಕುಳಿತು ಹೋರಾಡೋಣ. ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಎಸ್ವಿ ಸುನೀಲ್, ಜನರಿಗೆ ಮನವಿ ಸಲ್ಲಿಸಿದ್ದಾರೆ.
ಜನತಾ ಕರ್ಫ್ಯೂಗೆ ಮೆಚ್ಚುಗೆ
ಇಡೀ ಭಾರತವೇ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು ನೋಡಿ ಖುಷಿಯಾಯಿತು. ಇಡೀ ಭಾರತವೇ ಒಗ್ಗಟ್ಟಾಗಿ ಕೆಲಸ ಮಾಡಿದೆ. ಮುಂದೆಯೂ ಇದೇ ರೀತಿ ಸರ್ಕಾರದ ಕರೆಗೆ ಜನರು ಸ್ಪಂದಿಸಬೇಕು. ಕರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೆ ಇದೇ ರೀತಿ ಸಹಕರಿಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಸುನೀಲ್ ಹೇಳಿದ್ದಾರೆ.
ಕನ್ನಡಿಗನಿಗೆ 3ನೇ ಒಲಿಂಪಿಕ್ಸ್
ವಿಶ್ವದ ಅತ್ಯಂತ ಚುರುಕಿನ ಹಾಕಿ ಆಟಗಾರ ಎನಿಸಿಕೊಂಡಿರುವ ಎಸ್ವಿ ಸುನೀಲ್ ರಾಷ್ಟ್ರೀಯ ತಂಡದಲ್ಲಿರುವ ಏಕೈಕ ಕನ್ನಡಿಗ. ಫಾರ್ವರ್ಡ್ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ. ಮೂಲತಃ ಕೊಡಗು ಜಿಲ್ಲೆ ಸೋಮವಾರಪೇಟೆಯವರಾದ ಸುನೀಲ್ಗೆ ಇದು 3ನೇ ಒಲಿಂಪಿಕ್ಸ್ ಆಗಲಿದೆ. ಇದಕ್ಕೂ ಮೊದಲು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ರಾಜ್ಯದ ವಿಆರ್ ರಘುನಾಥ್, ಸುನೀಲ್ ಆಡಿದ್ದರೆ, 2016ರ ರಿಯೋ ಒಲಿಂಪಿಕ್ಸ್ನಲ್ಲಿ ಎಸ್ವಿ ಸುನೀಲ್, ವಿಆರ್ ರಘುನಾಥ್, ನಿಕಿನ್ ಹಾಗೂ ಎಸ್ಕೆ ಉತ್ತಪ್ಪ ಆಡಿದ್ದರು.
ಇಂಥ ಸಂದಿಗ್ಧ ಸ್ಥಿತಿಯಲ್ಲಿ ಒಲಿಂಪಿಕ್ಸ್ ನಡೆಸುವುದು ಸೂಕ್ತವೇ?
-ಒಲಿಂಪಿಕ್ಸ್ಗೆ ಇನ್ನೂ ನಾಲ್ಕು ತಿಂಗಳು ಇದೆ. ಅಲ್ಲಿಯವರೆಗೆ ಕರೊನಾ ವೈರಸ್ ಭೀತಿ ಇರುವುದಿಲ್ಲ ಎಂದುಕೊಂಡಿದ್ದೇನೆ. ನೋಡೋಣ, ಒಲಿಂಪಿಕ್ಸ್ ನಡೆಯಬೇಕು ಎಂಬುದೇ ನನ್ನ ಅಭಿಪ್ರಾಯ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಅತಿದೊಡ್ಡ ಕ್ರೀಡಾಕೂಟ ಇದು. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಬೇಕೆಂಬ ಕನಸಿರುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಏನೂ ಹೇಳುವುದು ಸೂಕ್ತವಲ್ಲ. ಈ ವಿಷಯದಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ಹಾಕಿ ಇಂಡಿಯಾ ನಿರ್ಣಯವೇ ಅಂತಿಮವಾಗಿರುತ್ತದೆ. ನಾನೊಬ್ಬ ಆಟಗಾರನಾಗಿ ಆಡುವುದಷ್ಟೇ ಕೆಲಸ.
ಭಾರತಕ್ಕೆ ಈ ಬಾರಿ ಪದಕ ನಿರೀಕ್ಷಿಸಬಹುದಾ?
-ಖಂಡಿತವಾಗಿಯೂ, ಫೈನಲ್ ಪ್ರವೇಶಿಸುವುದೇ ತಂಡದ ಮೊದಲ ಆದ್ಯತೆ. ಇತ್ತೀಚಿನ ದಿನಗಳಲ್ಲಿ ಬಲಿಷ್ಠ ತಂಡಗಳ ಎದುರು ಉತ್ತಮ ನಿರ್ವಹಣೆ ತೋರುತ್ತಿದ್ದೇವೆ. ಫೈನಲ್ ಪ್ರವೇಶಿಸಿದರೆ ಪದಕ ಖಚಿತವಾದರೂ ನಮ್ಮ ಗುರಿ ಇರುವುದು ಸ್ವರ್ಣ ಪದಕದ ಮೇಲೆ. ಒಲಿಂಪಿಕ್ಸ್ನಲ್ಲಿ ಹಿಂದಿನ ಗತವೈಭವವನ್ನೇ ಮರಳಿ ಪಡೆಯುವುದೇ ತಂಡದ ಕನಸು.
ರಘುನಾಥ್ ಡಿ.ಪಿ.