

ಬಾಕು (ಅಜರ್ಬೈಜಾನ್): ಭಾರತದ ಯುವ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ನಲ್ಲಿ ಉಪಾಂತ್ಯ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 18 ವರ್ಷದ ಪ್ರಜ್ಞಾನಂದ ಅವರು ಜಿದ್ದಾಜಿದ್ದಿನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದೇಶಬಾಂಧವ ಅರ್ಜುನ್ ಎರಿಗೈಸಿ ವಿರುದ್ಧ 5-4ರಿಂದ ರೋಚಕ ಗೆಲುವು ದಾಖಲಿಸುವ ಮೂಲಕ ಈ ಸಾಧನೆ ಮಾಡಿದರು.
ದಿಗ್ಗಜ ವಿಶ್ವನಾಥನ್ ಆನಂದ್ ಅವರು 2000 ಮತ್ತು 2002ರಲ್ಲಿ ಚೆಸ್ ವಿಶ್ವಕಪ್ ಗೆದ್ದಿದ್ದರು. ನಂತರದಲ್ಲಿ ಈ ಪ್ರಶಸ್ತಿಯ ಸನಿಹ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪ್ರಜ್ಞಾನಂದ ಅವರದಾಗಿದೆ.
ಅಂತಿಮ ಎಂಟರ ಘಟ್ಟದ ಮೊದಲೆರಡು ಪಂದ್ಯಗಳಲ್ಲಿ 1-1 ಸಮಬಲ ಸಾಧಿಸಿದ ಬಳಿಕ ಅರ್ಜುನ್-ಪ್ರಜ್ಞಾನಂದ ಗುರುವಾರ ಟೈ-ಬ್ರೇಕರ್ನಲ್ಲೂ ನಿಕಟ ಪೈಪೋಟಿ ನಡೆಸಿದರು. ಟೈಬ್ರೇಕರ್ನಲ್ಲಿ ಇಬ್ಬರು ಆಟಗಾರರು 7 ಪಂದ್ಯಗಳಲ್ಲಿ ಸೆಣಸಿ ಅಂತಿಮವಾಗಿ ಸಡನ್ಡೆತ್ನಲ್ಲಿ ಪ್ರಜ್ಞಾನಂದ 19 ವರ್ಷದ ಅರ್ಜುನ್ ವಿರುದ್ಧ ರೋಚಕ ಗೆಲುವು ಒಲಿಸಿಕೊಂಡರು. ಪ್ರಜ್ಞಾನಂದ ಸೆಮೀಸ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಕಾದಾಡಲಿದ್ದಾರೆ. ಉಪಾಂತ್ಯ ಪ್ರವೇಶದೊಂದಿಗೆ ಪ್ರಜ್ಞಾನಂದ 2024ರ ಕ್ಯಾಂಡಿಡೇಟ್ ಚೆಸ್ ಟೂರ್ನಿಗೂ ಅರ್ಹತೆ ಪಡೆಯುವ ನಿರೀಕ್ಷೆ ಇದೆ.