ಚೆಂಡಿನ ಹೊಳಪಿಗೆ ಮೇಣದ ಲೇಪನ! ಕೂಕಬುರಾ ಕಂಪನಿಯಿಂದ ತಯಾರಿಕೆ, ಎಂಜಲು, ಬೆವರಿಗೆ ಪರ್ಯಾಯ

page 10 5
Published on

ಮೆಲ್ಬೋರ್ನ್: ಕರೊನಾ ಭೀತಿ ನಿವಾರಣೆಯಾದ ಬಳಿಕ ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡರೂ, ವೈರಸ್ ಹರಡುವ ಭೀತಿಯಿಂದಾಗಿ ಆಟಗಾರರು ಚೆಂಡಿನ ಹೊಳಪಿಗಾಗಿ ಎಂಜಲು ಮತ್ತು ಬೆವರು ಹಚ್ಚುವುದನ್ನು ನಿಷೇಧಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಅಗ್ರ ಚೆಂಡು ತಯಾರಕ ಕಂಪನಿ ‘ಕೂಕಬುರಾ’, ಎಂಜಲು-ಬೆವರಿಗೆ ಬದಲಿಯಾಗಿ ಚೆಂಡು ಪಾಲಿಶ್ ಮಾಡುವುದಕ್ಕಾಗಿಯೇ ವಿಶೇಷವಾದ ಮೇಣದ ಲೇಪನ ಸಿದ್ಧಪಡಿಸಲು ಮುಂದಾಗಿದೆ.

ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲರ್​ಗಳು ಚೆಂಡನ್ನು ಸ್ವಿಂಗ್ ಮಾಡಲು ಅದರ ಒಂದು ಪದರವನ್ನು ಒರಟು, ಮತ್ತೊಂದು ಬದಿಯನ್ನು ಹೊಳಪು ಮಾಡುವುದು ಅಗತ್ಯವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಎಂಜಲು-ಬೆವರಿಗೆ ಪರ್ಯಾಯವಾಗಿ ಚೆಂಡು ಪಾಲಿಶ್ ಮಾಡಲು ಕೃತಕ ವಸ್ತುಗಳ ಬಳಕೆಗೂ ಅವಕಾಶ ಮಾಡಿಕೊಡಲು ಐಸಿಸಿ ಈಗಾಗಲೆ ಚಿಂತನೆ ನಡೆಸಿದೆ.

ಹಾಲಿ ಅಸಾಧಾರಣ ಪರಿಸ್ಥಿತಿಯನ್ನು ಅರಿತುಕೊಂಡಿರುವ ಕೂಕಬುರಾ, ಮೇಣದ ಲೇಪನಿಯನ್ನು ಇನ್ನೊಂದು ತಿಂಗಳಲ್ಲಿ ಸಿದ್ಧಪಡಿಸುವುದಾಗಿ ತಿಳಿಸಿದೆ. ‘ಕೂಕಬುರಾದ ಸಂಶೋಧನ ಕೇಂದ್ರದಲ್ಲಿ ಹೊಸ ಉತ್ಪನ್ನವನ್ನು ಸಿದ್ಧಪಡಿಸುವ ಕೆಲಸ ಈಗಾಗಲೆ ಶುರುವಾಗಿದೆ. ಪಾಕೆಟ್ ಅಳತೆಯ ಸ್ಪಂಜ್​ನಂಥ ಲೇಪನಿ ಇದಾಗಿರುತ್ತದೆ. ಅಂಪೈರ್ ಅಥವಾ ಆಟಗಾರರು ಇದನ್ನು ಚೆಂಡಿನ ಮೇಲೆ ಹಚ್ಚಬಹುದು. ಬಳಿಕ ಉಜ್ಜುವ ಅಥವಾ ತಿಕ್ಕುವ ಮೂಲಕ ಚೆಂಡನ್ನು ಹೊಳಪುಗೊಳಿಸಬಹುದು ಎಂದು ಕೂಕಬುರಾದ ವ್ಯವಸ್ಥಾಪಕ ನಿರ್ದೇಶಕ ಬ್ರೆಟ್ ಎಲಿಯಟ್ ವಿವರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕ್ರೀಡಾ ಚಟುವಟಿಕೆ ಪುನರಾರಂಭಕ್ಕೆ ಇತ್ತೀಚೆಗೆ ಸಿದ್ಧಪಡಿಸಲಾಗಿರುವ ಮಾರ್ಗಸೂಚಿಯ ಅನ್ವಯ, ಆಟಗಾರರು ಅಭ್ಯಾಸದ ವೇಳೆಯಲ್ಲೂ ಚೆಂಡಿಗೆ ಎಂಜಲು ಅಥವಾ ಬೆವರು ಹಚ್ಚುವುದನ್ನು ನಿಷೇಧಿಸಲಾಗಿದೆ. -ಪಿಟಿಐ/ಏಜೆನ್ಸೀಸ್

ಕ್ರಿಕೆಟ್ ಸ್ಪರ್ಧಾತ್ಮಕತೆ ಉಳಿಸಲು ಅಗತ್ಯ: ಕ್ರಿಕೆಟ್​ನಲ್ಲಿ ಬ್ಯಾಟಿಂಗ್-ಬೌಲಿಂಗ್ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಎಂಜಲು-ಬೆವರಿಗೆ ಪರ್ಯಾಯ ವಸ್ತು ಅಗತ್ಯ ವಾಗಿದೆ. ಚೆಂಡನ್ನು ಪಾಲಿಶ್ ಮಾಡುವುದರಿಂದಲೇ ಯಾವ ಬೌಲರ್ ಕೂಡ ಮೇಲುಗೈ ಸಾಧಿಸುವುದಿಲ್ಲ. ಅದರ ಜತೆಗೆ ಬೌಲಿಂಗ್ ಕೌಶಲಗಳು ಅಗತ್ಯವಾಗಿರುತ್ತವೆ. ಹೀಗಾಗಿ ಚೆಂಡು-ಬ್ಯಾಟಿನ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಎಲಿಯಟ್ ತಿಳಿಸಿದ್ದಾರೆ. ಚೆಂಡು ವಿರೂಪವನ್ನು ಕಾನೂನುಬದ್ಧಗೊಳಿಸುವ ಐಸಿಸಿ ಚಿಂತನೆಗೆ ಈಗಾಗಲೆ ಮಾಜಿ ಆಟಗಾರರಿಂದ ವಿರೋಧವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net