ಇದು ಗೌತಮ್​ ಗಂಭೀರ್​ ಯುಗ! ರಿಷಭ್​ ಪಂತ್​ ಬೌಲಿಂಗ್​ ಕಂಡು ನಗೆಗಡಲಲ್ಲಿ ತೇಲಿದ ನೆಟ್ಟಿಗರು

Rishabh Panth
Published on

ನವದೆಹಲಿ: ದೆಹಲಿ ಪ್ರೀಮಿಯರ್​ ಲೀಗ್​ನಲ್ಲಿ ಶನಿವಾರ ನಡೆದ ಪುರಾನಿ ದಿಲ್ಲಿ 6 ಮತ್ತು ಸೌತ್​ ದಿಲ್ಲಿ ಸೂಪರ್​​ಸ್ಟಾರ್ಸ್​ ನಡುವಿನ ಪಂದ್ಯದಲ್ಲಿ ಕೊನೆಯ ಒವರ್​ ಬೌಲಿಂಗ್​ ಮಾಡುವ ಮೂಲಕ​ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ರಿಷಭ್​ ಪಂತ್​ ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಂತ್​ ಅವರು ಇದುವರೆಗೂ ಒಂದೇ ಒಂದು ಓವರ್​ ಎಸೆದಿಲ್ಲ. ಆದರೆ, ಸೌತ್​ ದಿಲ್ಲಿ ಸೂಪರ್​​ಸ್ಟಾರ್ಸ್​ ತಂಡಕ್ಕೆ ಗೆಲುವಿಗೆ 6 ಎಸೆತಗಳಲ್ಲಿ 1 ರನ್​ ಅವಶ್ಯಕತೆ ಇದ್ದಾಗ ಬೌಲಿಂಗ್​ ಮಾಡಿದ ಪಂತ್​ ಮೊದಲ ಎಸೆತದಲ್ಲೇ ಒಂದು ರನ್ ನೀಡಿದರು. ಈ ಪಂದ್ಯದಲ್ಲಿ ಪಂತ್​, ಲೆಗ್​ ಸ್ಪಿನ್​ ಬೌಲಿಂಗ್​ ಮಾಡಿದರು.​

ಪಂತ್​ ಬೌಲಿಂಗ್​ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಇತ್ತೀಚೆಗೆ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ನೇಮಕವಾದ ಗೌತಮ್​ ಗಂಭೀರ್​ ಅವರನ್ನು ಎಳೆದುತಂದಿದ್ದಾರೆ. ಗಂಭೀರ್​ ಕೋಚ್​ ಆದಾಗಿನಿಂದ ಬ್ಯಾಟ್ಸ್​ಮನ್​ಗಳಾದ ಸೂರ್ಯಕುಮಾರ್​ ಯಾದವ್​, ಶುಭಮನ್​ ಗಿಲ್​ ಮತ್ತು ರೋಹಿತ್​ ಶರ್ಮ ಅವರು ಶ್ರೀಲಂಕಾ ಸರಣಿಯ ಸಂದರ್ಭದಲ್ಲಿ ಬೌಲಿಂಗ್​ ಮಾಡಿದರು. ಬ್ಯಾಟ್ಸ್​ಮನ್​ಗಳನ್ನು ಅರೆಕಾಲಿಕ ಬೌಲರ್​ ಆಗಿ ಗಂಭೀರ್​ ತಯಾರು ಮಾಡುತ್ತಿದ್ದಾರೆ. ಇದೀಗ ರಿಷಭ್​ ಪಂತ್​ ದೆಹಲಿ ಪ್ರೀಮಿಯರ್​ ಲೀಗ್​ನಲ್ಲಿ ಬೌಲಿಂಗ್​ ಮಾಡಿದ್ದು, ಇದು ಗೌತಮ್​ ಗಂಭೀರ್​ ಯುಗ, ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಕೂಡ ಬೌಲಿಂಗ್​ ಮಾಡಬಹುದು ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ರಿಷಭ್​ ಪಂತ್​ ನಾಯಕತ್ವದ ಪುರಾನಿ ದಿಲ್ಲಿ 6 ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿತು. ತಂಡದ ಪರ ಅರ್ಪಿತ್​ ರಾಣಾ (59), ರಿಷಭ್​ ಪಂತ್​ (35), ಲಲಿತ್​ ಯಾದವ್​ (ಅಜೇಯ 34) ಹಾಗೂ ವನ್ಷಾ ಬೇಡಿ (ಅಜೇಯ 47) ರನ್​ ಕಲೆಹಾಕಿ ತಂಡ ಉತ್ತರ ರನ್​ ಗಳಿಸಲು ನೆರವಾದರು. ಸೌತ್​ ದಿಲ್ಲಿ ಸೂಪರ್​ಸ್ಟಾರ್ಸ್​ ಪರ ದಿವಿಜ್​ ಮೆಹ್ರಾ, ಆಯುಷ್​ ಬದೋನಿ ಮತ್ತು ಕುನ್ವಾರ್​ ಬಿಧುರಿ ತಲಾ ಒಂದೊಂದು ವಿಕೆಟ್​ ಪಡೆದರು.

198 ರನ್​ಗಳ ಗುರಿ ಬೆನ್ನತ್ತಿದ ಸೌತ್​ ದಿಲ್ಲಿ ಸೂಪರ್​ಸ್ಟಾರ್ಸ್​ 19.1 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ತಂಡದ ಪರ ಪ್ರಿಯಾನ್ಶಾ ಆರ್ಯ (57), ಸಾರ್ಥಕ್​ ರಾಯ್​ (41) ಮತ್ತು ಆಯುಷ್​ ಬದೋನಿ (57) ರನ್​ ಕಲೆಹಾಕಿದರು. ದಿಲ್ಲಿ ಪುರಾನಿ ತಂಡದ ಪರ ಶಿವಮ್​ ಶರ್ಮ 2 ವಿಕೆಟ್​ ಪಡೆದರೆ, ಪ್ರಿನ್ಸ್​ ಯಾದವ್​, ಆಯುಷ್​ ಸಿಂಗ್​, ಲಲಿತ್​ ಯಾದವ್​ ಹಾಗೂ ಅಂಕಿತ್​ ಭದನಾ ತಲಾ ಒಂದು ವಿಕೆಟ್​ ಕಬಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net