

ನವದೆಹಲಿ: ಸಂಚಾರಿ ಪೊಲೀಸ್ ಪೇದೆಯೊಬ್ಬರು ಲಂಚವಾಗಿ ಸ್ವೀಕರಿಸಿದ ಹಣವನ್ನು ಇತರೆ ಸಿಬ್ಬಂದಿ ಜತೆ ಹಂಚಿಕೊಳ್ಳುತ್ತಿರುವ ಆಘಾತಕಾರಿ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸ್ ಚೆಕ್ಪೋಸ್ಟ್ ಒಳಗೆ ಬಂದ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯ ಜತೆ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಕೆಲವೊತ್ತು ಮಾತನಾಡುವ ವ್ಯಕ್ತಿ ತನ್ನ ಜೇಬಿನಿಂದ ಹಣವನ್ನು ತೆಗೆದು ಅಲ್ಲಿಯೇ ಇದ್ದ ಒಂದು ಟೇಬಲ್ ಮೇಲೆ ಎಸೆದು ಅಲ್ಲಿಂದ ನಾಪತ್ತೆಯಾಗುತ್ತಾನೆ. ಇದಾದ ಬಳಿಕ ಪೊಲೀಸ್ ಪೇದೆ ಹಣವನ್ನು ತೆಗೆದುಕೊಂಡು, ಎಣಿಕೆ ಮಾಡಿ, ಅದನ್ನು ತನ್ನ ಪರ್ಸ್ ಒಳಗೆ ಇಟ್ಟು ತನ್ನ ಕಿಸೆ ಒಳಗೆ ಇಟ್ಟುಕೊಳ್ಳುತ್ತಾನೆ. ಈ ವೇಳೆ ಅದೇ ಚೆಕ್ಪೋಸ್ಟ್ಗೆ ಇಬ್ಬರು ಪೇದೆಗಳು ಆಗಮಿಸುತ್ತಾರೆ. ಬಳಿಕ ಮೂವರು ಲಂಚದ ಹಣವನ್ನು ಹಂಚಿಕೊಳ್ಳುತ್ತಾ ನಗಾಡುತ್ತಾರೆ. ಇದಿಷ್ಟು ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ.
ಈ ಘಟನೆ ದೆಹಲಿಯ ಗಾಜಿಪುರದ ಥ್ರಿಲ್ ಲೌರಿ ವೃತ್ತದಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಇಬ್ಬರು ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಓರ್ವ ಹೆಡ್ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವೈರಲ್ ಆಗಿರುವ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಾಥಮಿಕ ತನಿಖೆಯ ನಂತರ ಮೇಲಿನ 3 ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಸಮಗ್ರ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಕೆ ಸಕ್ಸೆನಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಲಂಚಬಾಕ ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಅಧಿಕಾರಿಗಳನ್ನು ಕೆಲಸದಿಂದ ಅಮಾನತಿನಲ್ಲಿ ಇಡುವ ಬದಲು ಕೆಲಸದಿಂದಲೇ ತೆಗೆದುಹಾಕಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. (ಏಜೆನ್ಸೀಸ್)