ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ; ವಿಡಿಯೋ ವೈರಲ್​

Afghanistan Viral video
Published on

ಕಿಂಗ್ಸ್​​ಟೌನ್​: ಅಮೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಸೂಪರ್​ 08 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಅಲ್ರೌಂಡ್​ ಪ್ರದರ್ಶನದ ಫಲವಾಗಿ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದು, ಜೂನ್​ 27ರಂದು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಹಾಲಿ ಟೂರ್ನಿಯಲ್ಲಿ ಗಾಯದ ಸಮಸ್ಯೆಯ ನಡುವೆಯೂ ಅಲ್ರೌಂಡ್​ ಪ್ರದರ್ಶನ ಮೂಲಕ ಅಫ್ಘಾನಿಸ್ತಾನ ತಂಡವು ಸೆಮಿಫಯನಲ್​ ಪ್ರವೇಶಿಸಿರುವುದನ್ನು ಕಂಡು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಅಫ್ಘಾನಿಸ್ತಾನ ತಂಡವು ಮೋಸದಾಟವಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಟಿ20 ವಿಶ್ವಕಪ್​ನ 52ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನ ತಂಡವು ಆರಂಭಿಕ ರೆಹಮಾನುಲ್ಲಾ ಗುರ್ಬಾಜ್​ (43 ರನ್, 55 ಎಸೆತ, 3 ಬೌಂಡರಿ, 1 ಸಿಕ್ಸರ್) ಫಲವಾಗಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 115 ರನ್​ಗಳಿಸಿತ್ತು. ಸುಲಭ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡಕ್ಕೆ ಆರಂಭದಲ್ಲಿ ಮಳೆ ಕಾಡಿತ್ತು. ಪಂದ್ಯವನ್ನು 19 ಓವರ್​ಗಳಿಗೆ ಇಳಿಸಿದ ಅಂಪೈರ್​ಗಳು ಬಾಂಗ್ಲಾದೇಶಕ್ಕೆ 114 ರನ್​ಗಳ ಗುರಿ ನೀಡಿದರು. ಬಾಂಗ್ಲಾಕ್ಕೆ ಆರಂಭಿಕ ಲಿಟನ್​ ದಾಸ್​ (54 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಅರ್ಧಶತಕದ ಫಲವಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು, ಈ ವೇಳೆ ಬಾಂಗ್ಲಾದೇಶವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ತಾನ ವೇಗಿಗಳಾದ ನವೀನ್​ ಉಲ್​ ಹಕ್​ (3.5-0-26-4), ರಶೀದ್​ ಖಾನ್​ (4-0-23-0), ಫಜಲಕ್​ ಫಾರೂಕಿ (2-0-15-1), ಗುಲ್ಬದ್ದಿನ್​​ ನೈಯಬ್​ (2-0-5-1) ತಂಡವನ್ನು ಸೆಮಿಫೈನಲ್​ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇತ್ತ ಅಫ್ಘಾನಿಸ್ತಾನ ತಂಡದ ಆಟಗಾರ ಗುಲ್ಬದ್ದಿನ್​ ನೈಯಬ್​ ಅವರು ಮೋಸವಾಟ ಆಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾಯಕ ರಶೀದ್​ ಖಾನ್​ ಕೂಡ ಅಸಮಾಧಾಗೊಂಡಿದ್ದು, ಈ ಬಗ್ಗೆ ಟೀಮ್​ ಇಂಡಿಯಾ ಆಟಗಾರ ಆರ್​. ಅಶ್ವಿನ್​ ಪ್ರತಿಕ್ರಿಯಿಸಿದ್ದಾರೆ. ಬಾಂಗ್ಲಾದೇಶ ಬ್ಯಾಟಿಂಗ್​ ಮಾಡುವ ವೇಳೆ ಸ್ಲಿಪ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಗಾಯಗೊಂಡು ಗುಲ್ಬದ್ದಿನ್​ ವೈದ್ಯರ ಸೂಚನೆ ಮೇರೆಗೆ ಮೈದಾನದಿಂದ ಹೊರನಡೆದರು. ಈ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಅಫ್ಘಾನಿಸ್ತಾನ ತಂಡದ ಕೋಚ್​ ಜೊನಾಥನ್ ಟ್ರಾಟ್ ಅವರು ಡಗ್​ಔಟ್​ನಿಂದ ಗುಲ್ಬದ್ದಿನ್​ಗೆ ಸೂಚನೆ ನೀಡುತ್ತಾರೆ. ಅದರಂತೆ ಗುಲ್ಬದ್ದಿನ್​ ಕಾಲಿನ ನೋವೆಂದು ಹೇಳುತ್ತಾ ಕೆಳಗೆ ಬೀಳುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಕುರಿತು ಟೀಮ್​ ಇಂಡಿಯಾ ಆಟಗಾರ ಅಶ್ವಿನ್​ ಪ್ರತಿಕ್ರಿಯಿಸಿದ್ದು, ಅಫ್ಘಾನಿಸ್ತಾನ ಆಟಗಾರನ ನಡೆಯನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ಬಾಂಗ್ಲಾ ಕ್ರಿಕೆಟ್​ ಅಭಿಮಾನಿಗಳು ಕಿಡಿಕಾರಿದ್ದು, ಕಠಿಣ ಕ್ರಮ ಜರುಗಿಸುವಂತೆ ಐಸಿಸಿಗೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net