

ನವದೆಹಲಿ: ಇತ್ತಿಚಿನ ವರ್ಷಗಳಲ್ಲಿ ಕ್ರೀಡಾ ವಲಯದಲ್ಲಿ ವಿವಾದದ ಕೇಂದ್ರ ಬಿಂದು ಎಂದರೆ ಮೊದಲಿಗೆ ಕೇಳಿ ಬರುವುದು ಪಾಕಿಸ್ತಾನ ಕ್ರಿಕೆಟ್ ತಂಡದ ಹೆಸರು. ಐರ್ಲೆಂಡ್ ಯುಎಸ್ಎ ಹಾಗೂ ಭಾರತ ವಿರುದ್ಧದ ಕಳಪೆ ಪ್ರದರ್ಶನಕ್ಕಾಗಿ ತೀವ್ರ ಅವಮಾನಕ್ಕೊಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಕಾಣುತ್ತಿದೆ. ಅದಕ್ಕೆ ಪೂರಕವೆಂಬಂತೆ ಕೋಚ್ ಗ್ಯಾರಿ ಕರ್ಸ್ಟನ್ ನೀಡಿರುವ ಹೇಳಿಕೆ ತಂಡದಲ್ಲಿನ ಭಿನ್ನಾಭಿಪ್ರಾಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ಆಂತರಿಕ ಕಿತ್ತಾಟ ಸಂಸತ್ನಲ್ಲೂ ಪ್ರತಿಧ್ವನಿಸಿದ್ದು, ಸಂಸತ್ ಸದಸ್ಯರಾದ ಅಬ್ದುಲ್ ಖಾದಿರ್ ಪಟೇಲ್ ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು ಯತ್ನಿಸಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಉಲ್ಲೇಖಿಸಿ ಬಾಬರ್ ಅಜಂ ಹಾಗೂ ತಂಡದವರ ವಿರುದ್ಧ ಕಿಡಿಕಾರಿದ್ದಾರೆ.
ಇವರಿಗೆ ಏನಾಗಿದೆ. ವಿಶ್ವಕಪ್ನಲ್ಲಿ ಯುಎಸ್ಎ ಹಾಗೂ ಭಾರತದ ವಿರುದ್ಧ ಸೋತ ಇವರು ಮೊದಲಿಗೆ ಹಿರಿಯ ಕ್ರಿಕೆಟಿಗರಿಂದ (ಇಮ್ರಾನ್ ಖಾನ್) ಸಲಹೆ ಹಾಗೂ ತರಬೇತಿಯನ್ನು ಪಡೆಯಬೇಕಿದೆ. ಇದಾದ ಬಳಿಕ ಪಾರ್ಟಿ ಒಂದನ್ನು ಆಯೋಜಿಸಬೇಕಿದ್ದು, ಅವರು ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ದೂರುತ್ತ ಸಾರ್ವಜನಿಕವಾಗಿ ಪೇಪರ್ಗಳನ್ನು ಹರಿದುಹಾಕಬೇಕಿದೆ. ಆ ನಂತರ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಬಾಬರ್ ಅಜಂ ವಿರುದ್ದವೂ ಗುಡುಗಿದ ಅಬ್ದುಲ್ ಖಾದಿರ್ ಶಿಫಾರಸ್ಸಿನ ಮೇಲೆ ನಾಯಕತ್ವ ವಹಿಸಿದರೆ ಹೀಗೆ ಆಗುತ್ತದೆ. ಆದೆಷ್ಟು ಬೇಗ ಸರ್ಕಾರ ಹಾಗೂ ಮಂಡಳಿ ಇದರ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸತ್ ಸದಸ್ಯರಾದ ಅಬ್ದುಲ್ ಖಾದಿರ್ ಪಟೇಲ್ ಆಗ್ರಹಿಸಿದ್ದಾರೆ. ಇವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.