

Sanju Samson : ಪಕ್ಕದ ರಾಜ್ಯ ಕೇರಳದಲ್ಲಿ ಪ್ರಸ್ತುತ ಕ್ರಿಕೆಟ್ ಲೀಗ್ ಒಂದು ನಡೆಯುತ್ತಿದೆ. ಅದುವೇ ಕೇರಳ ಕ್ರಿಕೆಟ್ ಲೀಗ್ -2025. ಇದರ ಭಾಗವಾಗಿ ನಿನ್ನೆ (ಆಗಸ್ಟ್ 24) ಕೊಚ್ಚಿ ಬ್ಲ್ಯೂ ಟೈಗರ್ಸ್ ಮತ್ತು ಏರೀಸ್ ಕೊಲ್ಲಂ ಸೈಲರ್ಸ್ ನಡುವೆ ನಡೆದ ಪಂದ್ಯವು ಭಾರಿ ರೋಚಕತೆಯೊಂದಿಗೆ ಕೊನೆಗೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಲಂ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಿತು. ತಂಡದ ಪರ ವಿಷ್ಣು ವಿನೋದ್ ಮತ್ತು ನಾಯಕ ಸಚಿನ್ ಬೇಬಿ ಕ್ರಮವಾಗಿ 94 ಮತ್ತು 91 ರನ್ ಕಲೆಹಾಕಿದರು. ಬಳಿಕ ಬೃಹತ್ ಗುರಿ ಬೆನ್ನತ್ತಿದ ಕೊಚ್ಚಿ ಪರ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಹೀರೋ ಆದರು. ನಾಯಕ ಸಂಜು ಕೇವಲ 51 ಎಸೆತಗಳಲ್ಲಿ 121 ರನ್ಗಳೊಂದಿಗೆ ಸ್ಫೋಟಕ ಶತಕ ಬಾರಿಸಿದರು. ಆದರೆ, ಕೊನೆಯ ಹಂತದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಮೊಹಮ್ಮದ್ ಆಶಿಕ್. ಏಕೆಂದರೆ, 1 ಎಸೆತದಲ್ಲಿ ಗೆಲುವಿಗೆ 6 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ಓವರ್ನಲ್ಲಿ ಕೊಚ್ಚಿ ಟೈಗರ್ಸ್ ತಂಡಕ್ಕೆ 17 ರನ್ಗಳು ಬೇಕಿತ್ತು. ಈ ವೇಳೆ ಆಶಿಕ್ ಕ್ರೀಸ್ನಲ್ಲಿದ್ದರು. ಶರೀಫುದ್ದೀನ್ ಎಸೆದ ಕೊನೆಯ ಓವರ್ನ ಮೊದಲ ಎರಡು ಎಸೆತದಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡರು. ಈ ವೇಳೆ ಅಲ್ಫಿ ಫ್ರಾನ್ಸಿಸ್ ಜಾನ್ ಸ್ಟ್ರೈಕ್ಗೆ ಬಂದರು. ನಾಲ್ಕನೇ ಎಸೆತದಲ್ಲಿ ಶರೀಫುದ್ದೀನ್ ಅವರು ಜಾನ್ ಅವರನ್ನು ಔಟ್ ಮಾಡಿದರು. ಜಾನ್ ಅವರು ರನೌಟ್ ಆದರು ಕೂಡ ಆಶಿಕ್ ಅವರನ್ನು ಮರಳಿ ಕ್ರೀಸ್ಗೆ ತಂದರು. ಬಳಿಕ ಐದನೇ ಎಸೆತವನ್ನು ಆಶಿಕ್ ಡಾಟ್ ಮಾಡಿದರು. ಈ ವೇಳೆ ಗೆಲುವಿಗೆ ಒಂದು ಎಸೆತದಲ್ಲಿ 6 ರನ್ ಅವಶ್ಯಕತೆ ಇತ್ತು. ಈ ವೇಳೆ ಆಶಿಕ್, ತಮ್ಮ ಎಲ್ಲ ಬಲವನ್ನು ಬಿಟ್ಟು ಶರೀಫುದ್ದೀನ್ ಎಸೆದ ಕೊನೆಯ ಎಸೆತವನ್ನು ಸಿಕ್ಸರ್ಗೆ ಬಾರಿಸಿದರು.
ಆಶಿಕ್ ಸಿಕ್ಸರ್ ಬಾರಿಸುತ್ತಿದ್ದಂತೆ ಇಡೀ ತಂಡ ಮೈದಾನದ ಒಳಗೆ ಜಿಗಿದು ಸಂಭ್ರಮಾಚರಣೆ ಮಾಡಿತು. ಈ ವೇಳೆ ಬೌಂಡರಿ ಗೆರೆಯ ಬಳಿ ನಿಂತಿದ್ದ ಸಂಜು ಮುಖದಲ್ಲಿ ಸಣ್ಣದಾಗಿ ಒಂದು ನಗು ಮೂಡಿತು. ಅಂತಿಮವಾಗಿ ಕೊಚ್ಚಿ ತಂಡ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ 121 ರನ್ಗಳ ಸ್ಫೋಟಕ ಶತಕ ಬಾರಿಸಿದ ಸಂಜು, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂದಹಾಗೆ ಕೊಚ್ಚಿ ತಂಡ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಜಯದ ಓಟವನ್ನು ಮುಂದುವರಿಸಿದೆ. ಇದಕ್ಕೂ ಮುನ್ನ ಶನಿವಾರ ಕೊಚ್ಚಿ ಬ್ಲೂ ಟೈಗರ್ಸ್ ಪರ ಮೊದಲ ಪಂದ್ಯವಾಡಿದ ಸ್ಯಾಮ್ಸನ್ 22 ಎಸೆತಗಳಲ್ಲಿ 13 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ, ಆ ನಿರಾಸೆಯನ್ನು ನಿನ್ನೆಯ ಪಂದ್ಯದಲ್ಲಿ ಮರೆಸಿದರು.
ಭಾರತ ಪರ 42 ಟಿ20 ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್, 38 ಇನ್ನಿಂಗ್ಸ್ಗಳಲ್ಲಿ 25.38 ಸರಾಸರಿಯಲ್ಲಿ 861 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷದಿಂದ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಐದು ಇನ್ನಿಂಗ್ಸ್ಗಳಲ್ಲಿ ಮೂರು ಶತಕಗಳನ್ನು ಗಳಿಸುವ ಮೂಲಕ ಆರಂಭಿಕ ಆಟಗಾರನಾಗಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿರುವ ಭಾರತದ ಏಷ್ಯಾ ಕಪ್ ತಂಡದಲ್ಲಿ ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ. (ಏಜೆನ್ಸೀಸ್)