

ಬೆಂಗಳೂರು: ಚಂದ್ರನ ಮೇಲೆ ಭಾರತ ತ್ರಿವರ್ಣ ಧ್ವಜ ನೆಟ್ಟಾಯಿತು, ಇನ್ನು ಅಲ್ಲಿ ಹೋಗಿ ಕ್ರಿಕೆಟ್ ಆಡುವುದೊಂದೇ ಬಾಕಿ! ಚಂದ್ರಯಾನ-3 ಯಶಸ್ಸಿನ ಬಳಿಕ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಅಂಥ ಕನಸುಗಳಿಂದ ಕೂಡಿರುವುದು ವಿಶೇಷ.
ಚಂದ್ರನ ಮೇಲೆ ಭಾರತದ ಲ್ಯಾಂಡರ್ (ವಿಕ್ರಮ) ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಬಳಿಕ ಕಳುಹಿಸಿರುವ ಚಂದ್ರನ ಮೇಲ್ಮೈನ ಚಿತ್ರವನ್ನು ಕ್ರಿಕೆಟ್ ಪಿಚ್ಗೆ ಹೋಲಿಸಿ ವಾಸಿಂ ಜಾಫರ್ ಇಂಥದ್ದೊಂದು ಟ್ವೀಟ್ ಮಾಡಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
ಚಂದ್ರ ಮೇಲ್ಮೈಯನ್ನು ಕ್ರಿಕೆಟ್ ಪಿಚ್ಗೆ ಹೋಲಿಸಿ ಅದರ ಪಿಚ್ ರಿಪೋರ್ಟ್ ನೀಡಿರುವ ದೇಶೀಯ ಕ್ರಿಕೆಟ್ ದಿಗ್ಗಜ ವಾಸಿಂ ಜಾಫರ್, "ಇಂದು ಖಂಡಿತವಾಗಿಯೂ ಮೊದಲು ಬ್ಯಾಟಿಂಗ್ ಮಾಡಬಹುದಾದ ಪಿಚ್. ನಾನು ಮೂವರು ಸ್ಪಿನ್ನರ್ಗಳ ಜತೆಗೆ ಓರ್ವ ವೇಗಿಯನ್ನು ಆಯ್ದುಕೊಳ್ಳುತ್ತೇನೆ. ಜತೆ ಓರ್ವ ಆಲ್ರೌಂಡರ್ ಇರಬೇಕು' ಎಂದು ತಮಾಷೆಯಾಗಿ ವಿಶ್ಲೇಷಿಸಿದ್ದಾರೆ. ಇದಕ್ಕೆ ಕ್ರಿಕೆಟ್ ಪ್ರೇಮಿಗಳೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.