

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಮತ್ತೊಮ್ಮೆ ಭಾರತ ತಂಡದ ಹಂಗಾಮಿ ಕೋಚ್ ಆಗಿ ನೇಮಕಗೊಳಿಸಲಾಗಿದೆ. ನವೆಂಬರ್ 8ರಿಂದ ನಡೆಯಲಿರುವ ಸರಣಿಯಲ್ಲಿ ಭಾರತ ತಂಡ 4 ಟಿ20 ಪಂದ್ಯಗಳನ್ನು ಆಡಲಿದೆ.
ನವೆಂಬರ್ 22ರಿಂದ ನಡೆಯಲಿರುವ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತ ತಂಡ ನವೆಂಬರ್ 10ರಂದೇ ತೆರಳಲಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಟೆಸ್ಟ್ ತಂಡದೊಂದಿಗೆ ಆಸ್ಟ್ರೆಲಿಯಾಕ್ಕೆ ತೆರಳಲಿದ್ದಾರೆ. ಹೀಗಾಗಿ ಅದೇ ಸಮಯದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲಿ ಬಿಸಿಸಿಐ, ಲಕ್ಷ್ಮಣ್ಗೆ ತಾತ್ಕಾಲಿಕ ಜವಾಬ್ದಾರಿ ನೀಡಿದೆ.
ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಿಂಬಾಬ್ವೆ, ಐರ್ಲೆಂಡ್ ಪ್ರವಾಸಗಳಿಗೆ ತೆರಳಿದ ಭಾರತದ 2ನೇ ದರ್ಜೆ ತಂಡಗಳಿಗೂ ಮಾರ್ಗದರ್ಶನ ನೀಡಿದ್ದರು.
ದ. ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಬಿಸಿಸಿಐ ಇತ್ತೀಚೆಗಷ್ಟೇ ವ್ಯವಸ್ಥೆಗೊಳಿಸಿದೆ. ದ. ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್ಎ) ಕೋರಿಕೆಯ ಮೇರೆಗೆ ಸರಣಿ ನಿಗದಿಗೊಳಿಸಲಾಗಿದೆ. ಭಾರತ-ದ. ಆಫ್ರಿಕಾ ತಂಡಗಳೇ ಇತ್ತೀಚೆಗೆ ಟಿ20 ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿ ಆಗಿದ್ದರಿಂದ ಈ ಕಾದಾಟ ಕುತೂಹಲ ಕೆರಳಿಸಿದೆ. ಆತಿಥೇಯ ದ. ಆಫ್ರಿಕಾ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿದೆ.
ಸರಣಿಯ 4 ಪಂದ್ಯಗಳು ಕ್ರಮವಾಗಿ ಡರ್ಬನ್ (ನ.8), ಗೆರ್ಬಹ (ನ.10), ಸೆಂಚುರಿಯನ್ (ನ.13) ಮತ್ತು ಜೊಹಾನ್ಸ್ರ್ಬಗ್ನಲ್ಲಿ (ನ.15) ನಡೆಯಲಿವೆ. ಸೂರ್ಯಕುಮಾರ್ ಸಾರಥ್ಯದ ಭಾರತ ತಂಡ ನವೆಂಬರ್ 3ರಂದು ದ. ಆಫ್ರಿಕಾಕ್ಕೆ ಪ್ರಯಾಣಿಸಲಿದೆ.
ಎನ್ಸಿಎ ಸಿಬ್ಬಂದಿಗೆ ಹೊಣೆ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಜತೆಗೆ ಎನ್ಸಿಎಯ ಇತರ ಸಿಬ್ಬಂದಿಯಾದ ಸಾಯಿರಾಜ್ ಬಹುತುಳೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಸುಭದೀಪ್ ಘೋಷ್ ಕೂಡ ದಣ ಆಫ್ರಿಕಾದಲ್ಲಿ ತರಬೇತಿ ಬಳಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬಹುತುಳೆ, ಕಾನಿಟ್ಕರ್ ಮತ್ತು ಘೋಷ್ ಇತ್ತೀಚೆಗೆ ಭಾರತ ಎ ತಂಡದ ತರಬೇತುದಾರರಾಗಿ ಎಮರ್ಜಿಂಗ್ ಏಷ್ಯಾಕಪ್ಗೂ ತೆರಳಿದ್ದರು. ಎನ್ಸಿಎಯ ಇನ್ನಿಬ್ಬರು ತರಬೇತುದಾರರಾದ ಸೌರಾಷ್ಟ್ರ ಸಿತಾಂಶು ಕೋಟಕ್ ಮತ್ತು ಕೇರಳದ ಮಜಾರ್ ಮೋಯಿದು ಆಸ್ಟ್ರೆಲಿಯಾ ಪ್ರವಾಸಕ್ಕೆ ತೆರಳಿರುವ ಋತುರಾಜ್ ಗಾಯಕ್ವಾಡ್ ಸಾರಥ್ಯದ ಭಾರತ ಎ ತಂಡದೊಂದಿಗೆ ಇದ್ದಾರೆ.
ಐಪಿಎಲ್ ಹರಾಜಿಗೆ ಮುನ್ನ ಟ್ರಯಲ್ಸ್
ದ. ಆಫ್ರಿಕಾ ಪ್ರವಾಸದ ಟಿ20 ಸರಣಿಯು ಮುಂಬರುವ ಐಪಿಎಲ್ ಆಟಗಾರರ ಹರಾಜಿಗೆ ಮುನ್ನ ಫ್ರಾಂಚೈಸಿಗಳ ಗಮನಸೆಳೆಯಲು ಯುವ ಕ್ರಿಕೆಟಿಗರಿಗೆ ಉತ್ತಮ ವೇದಿಕೆ ಎನಿಸಿದೆ. ಐಪಿಎಲ್ ತಂಡಗಳು ರಿಟೇನ್ ಮಾಡಿಕೊಳ್ಳದ ಆಟಗಾರರು ನವೆಂಬರ್ನಲ್ಲೇ ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸರಣಿಯಲ್ಲಿ ಮಿಂಚಿದರೆ ಹರಾಜಿನಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ ಅವಕಾಶ ಹೊಂದಿದ್ದಾರೆ.
ದಿಢೀರ್ ಸರಣಿ ಬಗ್ಗೆ ಟೀಕೆ!
ದೇಶೀಯ ಕ್ರಿಕೆಟ್ ಟೂರ್ನಿ ಭರದಿಂದ ಸಾಗುತ್ತಿರುವ ನಡುವೆ ಭಾರತ ಟೆಸ್ಟ್ ತಂಡ 18 ಆಟಗಾರರೊಂದಿಗೆ ಆಸ್ಟ್ರೆಲಿಯಾಕ್ಕೆ ಸಾಗುತ್ತಿದ್ದರೆ, 15 ಆಟಗಾರರ ಭಾರತ ಎ ತಂಡ ಈಗಾಗಲೆ ಕಾಂಗರೂ ನಾಡಿಗೆ ತೆರಳಿದೆ. ಇತ್ತ ಇನ್ನು 15 ಆಟಗಾರರ ಟಿ20 ತಂಡ ದಣ ಆಫ್ರಿಕಾಕ್ಕೆ ತೆರಳುತ್ತಿದೆ. ಆಸೀಸ್ಗೆ ಮೂವರು ವೇಗಿಗಳು ಟೆಸ್ಟ್ ತಂಡದೊಂದಿಗೆ ಮೀಸಲು ಆಟಗಾರರಾಗಿಯೂ ತೆರಳುತ್ತಿದ್ದಾರೆ. ಇದರಿಂದಾಗಿ ಸುಮಾರು 50 ಪ್ರಮುಖ ಆಟಗಾರರು ದೇಶೀಯ ಕ್ರಿಕೆಟ್ನಿಂದ ದೂರ ಉಳಿಯುವಂತಾಗಿದೆ. ಹೀಗಾಗಿ ದ. ಆಫ್ರಿಕಾ ವಿರುದ್ಧದ ಸರಣಿಯ ಅಗತ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮಾಜಿ ನಾಯಕ ಸುನೀಲ್ ಗಾವಸ್ಕರ್ ಇತ್ತೀಚೆಗೆ ತನ್ನ ಅಂಕಣವೊಂದರಲ್ಲಿ ಈ ಬಗ್ಗೆ ಟೀಕೆಯನ್ನೂ ಮಾಡಿದ್ದಾರೆ.