

ಬೆಂಗಳೂರು: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ವೇಗಿ ವೈಶಾಕ್ ವಿಜಯ್ಕುಮಾರ್, ತನ್ನ ಕನಸು ನನಸಾಗಿದೆ ಎಂದು ಸಂಭ್ರಮಿಸಿದ್ದಾರೆ. ಐದು ವರ್ಷಗಳ ಹಿಂದೆ ಅಧಿಕ ದೇಹತೂಕದ ಸಮಸ್ಯೆ ಎದುರಿಸಿದ್ದ ವೈಶಾಕ್, ಮನೆಯಲ್ಲಿ ಕನ್ನಡಿಯಲ್ಲಿ ತನ್ನ ದಪ್ಪ ದೇಹವನ್ನು ನೋಡಿ ಅತ್ತಿದ್ದರು. ಜತೆಗೆ ತಾನು ಉನ್ನತ ದರ್ಜೆಯ ವೇಗದ ಬೌಲರ್ ಆಗುವ ಬಗ್ಗೆ ಅನುಮಾನ ಹೊಂದಿದ್ದರು. ಆದರೆ ನಂತರದಲ್ಲಿ ಅಥ್ಲೆಟಿಕ್ಸ್ ಕೋಚ್ ಬಿಪಿ ಅಯ್ಯಪ್ಪ, ಟ್ರೇನರ್ಗಳಾದ ಸಾಯಿ ಪ್ರಸನ್ನ ಮತ್ತು ಪುನೀತ್ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಪಟ್ಟು ದೇಹತೂಕ ಕರಗಿಸಿಕೊಂಡಿದ್ದರು. ಭಾರತ ಪರ ಆಡುವ ಅವಕಾಶದೊಂದಿಗೆ, ಅದಕ್ಕೀಗ ತಕ್ಕ ಪ್ರತಿಫಲವನ್ನೂ ಅವರು ಪಡೆದುಕೊಂಡಿದ್ದಾರೆ.
"ಭಾರತ ಪರ ಆಡುವುದು ಪ್ರತಿ ಕ್ರಿಕೆಟಿಗನ ಕನಸು. ನನಗೆ ಈಗ ಖುಷಿಯಿಂದ ಮಾತೇ ಹೊರಡುತ್ತಿಲ್ಲ' ಎಂದು 27 ವರ್ಷದ ವೈಶಾಕ್ ರಾಷ್ಟ್ರೀಯ ತಂಡದ ಚೊಚ್ಚಲ ಕರೆಗೆ ಪ್ರತಿಕ್ರಿಯಿಸಿದ್ದಾರೆ. ಪ್ರಸಕ್ತ ಪಟನಾದಲ್ಲಿ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವ ವೈಶಾಕ್, ಬೆಂಗಳೂರಿನ ವಿಜಯ್ಕುಮಾರ್ ಮತ್ತು ಬೃಂದಾ ದಂಪತಿಯ ಏಕೈಕ ಪುತ್ರನಾಗಿದ್ದಾರೆ. ವೈಶಾಕ್ ತಂದೆ ವಿಜಯ್ಕುಮಾರ್ ಕೆಎಸ್ಸಿಎಯ ಮೊದಲ ಡಿವಿಷನ್ನಲ್ಲಿ ಆಡಿದ ಕ್ರಿಕೆಟಿಗರಾಗಿದ್ದಾರೆ.
ವೈಶಾಕ್ ಈ ಹಿಂದೆ ಫಿಟ್ನೆಸ್ ತರಬೇತಿಯ ನಡುವೆ ಚೆನ್ನೈಗೆ ತೆರಳಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲಿಂಗ್ ಕೋಚ್ ಭರತ್ ಅರುಣ್ ಬಳಿ ವಿಶೇಷ ತರಬೇತಿ ಪಡೆದಿದ್ದರು. ನಂತರದಲ್ಲಿ ವೈಶಾಕ್ ಸಂಪೂರ್ಣ ಭಿನ್ನ ವ್ಯಕ್ತಿ ಮತ್ತು ಬೌಲರ್ ಆಗಿ ಬದಲಾಗಿದ್ದರು ಎಂದು ಅವರ ತಂದೆ ವಿಜಯ್ಕುಮಾರ್ ಹೇಳಿದ್ದಾರೆ. 2021-22ರ ದೇಶೀಯ ಕ್ರಿಕೆಟ್ ಋತುವಿನ ವೇಳೆ ರಾಜ್ಯದ ಅನುಭವಿ ವೇಗಿ ಅಭಿಮನ್ಯು ಮಿಥುನ್ ಕೂಡ ವೈಶಾಕ್ಗೆ ಉತ್ತಮ ಟಿಪ್ಸ್ಗಳನ್ನು ನೀಡಿ ನೆರವಾಗಿದ್ದರು ಎಂದು ವಿಜಯ್ಕುಮಾರ್ ತಿಳಿಸಿದ್ದಾರೆ.
2022ರಲ್ಲಿ ಕರ್ನಾಟಕ ಪರ ಪದಾರ್ಪಣೆ ಮಾಡಿದ ವೈಶಾಕ್, ಇದುವರೆಗೆ 26 ಪ್ರಥಮ ದರ್ಜೆ ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದ್ದಾರೆ. 30 ಟಿ20 ಪಂದ್ಯಗಳಲ್ಲಿ 42 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ, ಕೆಪಿಎಲ್/ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆಡಿದ್ದಾರೆ.