ಅಬ್ಬಬ್ಬಾ... ಹೀಗೂ ಬ್ಯಾಟ್​ ಬೀಸಬಹುದಾ? ವೈರಲ್​​ ಆಯ್ತು ಹೊಸ ರೀತಿಯ ಶಾಟ್​​ ವಿಡಿಯೋ... Luke Hollman

Luke Hollman
Published on

Luke Hollman : ಒಂದು ಕಾಲದಲ್ಲಿ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್ ಪುಸ್ತಕದಲ್ಲಿರುವ ಶಾಟ್‌ಗಳನ್ನು ಮಾತ್ರ ಆಡುತ್ತಿದ್ದರು. ಆದರೆ, ಟಿ20ಗಳ ಪರಿಚಯದ ನಂತರ, ಬ್ಯಾಟ್ಸ್‌ಮನ್‌ಗಳು ಆಡುವ ರೀತಿ ಸಂಪೂರ್ಣ ಬದಲಾಗಿದೆ.

ಟಿ20 ಅಂದರೆ ಅಲ್ಲಿ ಕೇವಲ ಹೊಡಿಬಡಿ ಆಟವಿರುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಆಟಗಾರರು ವಿಚಿತ್ರ ಶಾಟ್‌ಗಳನ್ನು ಆಡುತ್ತಿದ್ದಾರೆ. ಇತ್ತೀಚೆಗೆ, ಬ್ಯಾಟ್ಸ್‌ಮನ್‌ ಒಬ್ಬರು ಹೊಡೆದ ಶಾಟ್‌ನ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಪ್ರಸ್ತುತ ವೈಟಾಲಿಟಿ ಬ್ಲಾಸ್ಟ್ ಲೀಗ್ ನಡೆಯುತ್ತಿದೆ. ಈ ಲೀಗ್‌ನಲ್ಲಿ, ಮಿಡ್ಲ್‌ಸೆಕ್ಸ್ ಬ್ಯಾಟ್ಸ್‌ಮನ್ ಲ್ಯೂಕ್ ಹಾಲ್‌ಮನ್ ವಿಚಿತ್ರ ರೀತಿಯಲ್ಲಿ ಶಾಟ್ ಆಡಿದ್ದಾರೆ. ಹಾಲ್​ಮನ್​ ಆಡಿದ ಶಾಟ್ ನೋಡಿದ ನಂತರ, ನೆಟ್ಟಿಗರು ಮತ್ತೊಂದು ಹೊಸ ರೀತಿಯ ಶಾಟ್​ ಹುಟ್ಟಿಕೊಂಡಿದೆ ಎನ್ನುತ್ತಿದ್ದಾರೆ.

ವೈಟಾಲಿಟಿ ಟಿ20 ಬ್ಲಾಸ್ಟ್​ನ ಭಾಗವಾಗಿ ಬುಧವಾರ ಮಿಡ್ಲ್ ಸೆಕ್ಸ್ ಮತ್ತು ಸರ್ರೆ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಮಿಡ್ಲ್ ಸೆಕ್ಸ್ ತಂಡದ ಇನ್ನಿಂಗ್ಸ್​ನ 19ನೇ ಓವರ್​ನಲ್ಲಿ ಲ್ಯೂಕ್ ಹಾಲ್​ಮನ್ ಹೊಸ ಶಾಟ್ ಬಾರಿಸಿದರು. ಸರ್ರೆ ಬೌಲರ್ ಸ್ಯಾಮ್ ಕರನ್ ಈ ಓವರ್ ಎಸೆದರು. ಓವರ್​ನ ಐದನೇ ಎಸೆತವನ್ನು ಲ್ಯೂಕ್ ಜಾಣತನದಿಂದ ಸಿಕ್ಸರ್​ ಬಾರಿಸಿದರು.

ಆರಂಭದಲ್ಲಿ ಹಾಲ್​ಮನ್​ ಚೆಂಡನ್ನು ಸ್ಕೂಪ್​ ಮಾಡಲು ರೆಡಿಯಾಗಿದ್ದರು. ಆದರೆ, ಬೌಲರ್​ ಚೆಂಡನ್ನು ನಿಧನವಾಗಿ ವೈಡ್​ ಕಡೆ ಎಸೆದಾಗ, ತನ್ನ ಸ್ಥಾನವನ್ನು ಬದಲಾಯಿಸಿದ ಲ್ಯೂಕ್, ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿದರು. ತಾವು ಹೊಡೆದ ರೀತಿಯನ್ನು ನೋಡಿ ಸ್ವತಃ ಹಾಲ್​ಮನ್​ ನಕ್ಕಿದರು.

ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಸರ್ರೆ ತಂಡವು 8 ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಸರ್ರೆ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು. ಸರ್ರೆ ಪರ ವಿಲ್ ಜ್ಯಾಕ್ಸ್ (52) ಅರ್ಧಶತಕ ಗಳಿಸಿದರು. ನಂತರ, ಗುರಿ ಬೆನ್ನಟ್ಟುವ ಮೂಲಕ, ಮಿಡ್ಲ್‌ಸೆಕ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 181 ರನ್‌ಗಳಿಗೆ ಸೀಮಿತವಾಯಿತು. ಲ್ಯೂಕ್ ಹಾಲ್‌ಮನ್ (ಔಟಾಗದೆ 32) ಅಜೇಯರಾಗಿ ಉಳಿದರು. ಆದರೆ, ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net