

ಹುಬ್ಬಳ್ಳಿ: ರಾಜ್ಯಮಟ್ಟದ ಸೀನಿಯರ್ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ 93 ಕೆ.ಜಿ. ವಿಭಾಗದಲ್ಲಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.
ಹುಬ್ಬಳ್ಳಿ ಜಿಲ್ಲಾ ಪವರ್ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪುರುಷರ 48ನೇ ಹಾಗೂ ಮಹಿಳೆಯರ 40ನೇ ಕರ್ನಾಟಕ ಸೀನಿಯರ್ ಪವರ್ಲಿಫ್ಟಿಂಗ್ ಸ್ಪರ್ಧೆ ಜೂ. 17 ಮತ್ತು 18ರಂದು ಹುಬ್ಬಳ್ಳಿಯ ರೈಲ್ವೇ ಸತಬಿದ್ದನ್ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಪವರ್ಲಿಫ್ಟರ್ಸ್ ಇದರಲ್ಲಿ ಭಾಗಿಯಾಗಿದ್ದರು.
ಇದರಲ್ಲಿ ಬೆಂಗಳೂರಿನ ಬಾಲಾರ್ಕ ಫಿಟ್ನೆಸ್ನ ವಿಶ್ವನಾಥ್ ಭಾಸ್ಕರ್ ಗಾಣಿಗ ಸ್ಕ್ವಾಟ್ 310 ಕೆ.ಜಿ, ಬೆಂಚ್ಪ್ರೆಸ್ 200 ಕೆ.ಜಿ. ಹಾಗೂ ಡೆಡ್ಲಿಫ್ಟ್ 325 ಕೆ.ಜಿ. ಸೇರಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರು ಪವರ್ಲಿಫ್ಟಿಂಗ್, ಬಾಲಾರ್ಕ ಫಿಟ್ನೆಸ್ ಹಾಗೂ ಮೆರಿಡಿಯನ್ ಫಿಟ್ನೆಸ್ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ಬೆಂಗಳೂರು ಜಿಲ್ಲಾಮಟ್ಟದ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬಾಲಾರ್ಕ ಫಿಟ್ನೆಸ್ನ 30ಕ್ಕೂ ಹೆಚ್ಚು ಪವರ್ಲಿಫ್ಟರ್ಗಳು 40ಕ್ಕೂ ಅಧಿಕ ಪದಕಗಳನ್ನು ಜಯಿಸಿದ್ದಾರೆ.
ಸೀನಿಯರ್ ವಿಭಾಗದಲ್ಲಿ ದತ್ತಾತ್ರೇಯ, ಮಾಸ್ಟರ್ ಮಹಿಳಾ ವಿಭಾಗದಲ್ಲಿ ಪೂರ್ಣಿಮಾ ಹೊಸ್ಕೆರೆ, ಪುರುಷರ ವಿಭಾಗದಲ್ಲಿ ಶಶಿಧರ ರಾಜು ಬೆಸ್ಟ್ ಲಿಫ್ಟರ್ ಸಾಧನೆ ಮಾಡಿದರು. ಜೂನಿಯರ್ ವಿಭಾಗದಲ್ಲಿ ವಿಶಾಲ್, ಸಬ್ ಜೂನಿಯರ್ ಮಹಿಳಾ ವಿಭಾಗದಲ್ಲಿ ದೇವಿಕಾ ದೇಸಾಯಿ ಬೆಸ್ಟ್ ಲಿಫ್ಟರ್ ಪಡೆದಿರುತ್ತಾರೆ. ಇವರಿಗೆಲ್ಲ ವಿಶ್ವನಾಥ್ ಭಾಸ್ಕರ್ ತರಬೇತು ನೀಡಿದ್ದರು.