

ಮುಂಬೈ: ಏಕದಿನ ವಿಶ್ವಕಪ್ 2023ರ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಸೆಮಿ-ಫೈನಲ್ ಹಂತವನ್ನು ತಲುಪಿದ್ದು, ನಾಲ್ಕನೇ ಸ್ಥಾನಕ್ಕೆ ಮಾತ್ರ ಭಾರೀ ಹಣಾಹಣಿ ನಡೆಯುತ್ತಿದೆ.
ಈ ಸಾಲಿನಲ್ಲಿರುವ ಪಾಕಿಸ್ತಾನ ತಂಡದ ಬಗ್ಗೆ ಇದೀಗ ಸಾಕಷ್ಟು ಕೂತೂಹಲ ಎದುರಾಗಿದೆ. ಅಸಲಿಗೆ ಬಾಬರ್ ಅಜಾಮ್ ತಂಡ ಸೆಮಿಸ್ಗೆ ಎಂಟ್ರಿ ಕೊಡಲು ಸಾಧ್ಯವೇ ಎಂಬ ಪ್ರಶ್ನೆಗಳು ಈಗ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ 'ಬಾಯ್ ಬಾಯ್ ಪಾಕಿಸ್ತಾನ' ಎಂದು ಟ್ವೀಟ್ ಮಾಡಿದ್ದಾರೆ.
ಈ ಬಾರಿಯ ವಿಶ್ವಕಪ್ ಆವೃತ್ತಿಯಲ್ಲಿ ಸತತ ಕಳಪೆ ಪ್ರದರ್ಶನದಿಂದಾಗಿ ಸೆಮೀಸ್ ರೇಸ್ನಿಂದ ಬಹುತೇಕ ದೂರ ಉಳಿದಿರುವ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸುವ ಅವಶ್ಯಕತೆ ಎದುರಾಗಿದೆ. ಹೆಚ್ಚುವರಿಯಾಗಿ ಎಲ್ಲಾ ಲೆಕ್ಕಾಚಾರಗಳ ಪ್ರಕಾರ ನೋಡುವುದಾದರೆ ಪಾಕಿಸ್ತಾನ ತಂಡ ಸೆಮೀಸ್ ಪ್ರವೇಶಿಸುವುದು ಬಹುತೇಕ ಡೌಟ್ ಇದೆ. ಆದ್ರೂ ಕೂಡ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಭರವಸೆ ಗಟ್ಟಿಯಾಗಿಯೇ ಉಳಿದಿದೆ.
ಪಾಕಿಸ್ತಾನ ತಂಡಕ್ಕೆ ಸೆಮಿ-ಫೈನಲ್ ಕನಸು ಭಗ್ನಗೊಳ್ಳುತ್ತಿದೆ ಎಂಬುದನ್ನು ಅರಿತ ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ಮ್ಯಾನ್ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಬಾಯ್ ಬಾಯ್ ಪಾಕಿಸ್ತಾನ ಎಂಬ ಫೋಟೋ ಹಾಕಿ ಟೀಕಿಸಿದ್ದಾರೆ. ಈ ಒಂದು ಟ್ವೀಟ್ಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶನಿವಾರ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸಲೇ ಬೇಕಿದೆ. ಒಂದು ವೇಳೆ ಪಾಕಿಸ್ತಾನ ಈ ಪಂದದ್ಯದಲ್ಲಿ ಸೋತರೆ ಸೆಮೀಸ್ ಕನಸು ಭಗ್ನಗೊಳ್ಳುವುದು ಖಚಿತ.
ಪ್ರಸ್ತುತ ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಪಾಕಿಸ್ತಾನ ತಂಡ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನು ಎದುರಿಸಿ, 4 ಪಂದ್ಯ ಗೆದ್ದು, 4 ಸೋಲುವ ಮುಖೇನ 5ನೇ ಸ್ಥಾನವನ್ನು ಅಲಂಕರಿಸಿದೆ,(ಏಜೆನ್ಸೀಸ್).