More

    ಚರಂಡಿ ನಿರ್ಮಾಣ ಮಾಡಲು ಸ್ಥಳೀಯ ಗ್ರಾಪಂ ನಿರ್ಲಕ್ಷ್ಯ: ಪ್ರಧಾನಿ ಕಾರ್ಯಾಲಯದಿಂದಲೇ ಬಂತು ಕಟ್ಟುನಿಟ್ಟಿನ ಸೂಚನೆ

    ಮಂಡ್ಯ: ಸ್ಥಳೀಯ ರಾಜಕಾರಣ ಮತ್ತು ಆಡಳಿತದ ನಿರ್ಲಕ್ಷ್ಯದಿಂದಾಗಿ ಮನೆ ಎದುರು ಚರಂಡಿ ಹಾಗೂ ಸ್ವಚ್ಛತಾ ಕಾಮಗಾರಿ ನಡೆಯದ ಕಾರಣ ಬೇಸತ್ತ ತಾಲೂಕಿನ ಹಳೇಬೂದನೂರು ಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್ ಬಿ.ಎಸ್.ಚಂದ್ರಶೇಖರ್ ಎಂಬಾತ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
    ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಚಂದ್ರಶೇಖರ್ ಅವರು ಕೋವಿಡ್ ಬಳಿಕ ವರ್ಕ್ ಫ್ರಮ್ ಹೋಂ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ತಮ್ಮ ಮನೆ ಮುಂದೆ ಚರಂಡಿ ನಿರ್ಮಿಸಿ, ಶುಚಿತ್ವ ಕಾಪಾಡಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಬೂದನೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಅದರಂತೆ ಕಾಮಗಾರಿ ನಿರ್ವಹಿಸಲು ಗ್ರಾಮಸಭೆಯಲ್ಲೂ ನಿರ್ಣಯವಾಗಿತ್ತು. ಆದರೆ, ಸ್ಥಳೀಯ ರಾಜಕೀಯ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಜಿಲ್ಲಾ ಪಂಚಾಯಿತಿಯ ಕುಂದುಕೊರತೆ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಅದರಂತೆ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ನಡೆಸುವಂತೆ ಸೂಚಿಸಿದ್ದರು.
    ಇಷ್ಟಾದರೂ ಕಾಮಗಾರಿ ನಡೆಸದ ಕಾರಣ ಪ್ರಾಧಿಕಾರವು ಗ್ರಾಮ ಪಂಚಾಯ್ತಿಗೆ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಪಿಡಿಒ ಮೇಲ್ಮನವಿ ಸಲಿಸಿದ್ದರು. ಈ ಬೆಳವಣಿಗೆ ನಡುವೆ ಚಂದ್ರಶೇಖರ್ ಅವರು ಸಿಪಿಜಿಆರ್‌ಎಂಎಸ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ ನೇರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಜು.5ರಂದು ಪತ್ರ ಬರೆದು ದೂರು ಸಲ್ಲಿಸಿದರು.

     

    ಚರಂಡಿ ನಿರ್ಮಾಣ ಮಾಡಲು ಸ್ಥಳೀಯ ಗ್ರಾಪಂ ನಿರ್ಲಕ್ಷ್ಯ: ಪ್ರಧಾನಿ ಕಾರ್ಯಾಲಯದಿಂದಲೇ ಬಂತು ಕಟ್ಟುನಿಟ್ಟಿನ ಸೂಚನೆ

    ಅದರಂತೆ ಪ್ರಧಾನಿ ಮಂತ್ರಿ ಕಾರ್ಯಾಲಯ ದೂರಿನ ಬಗ್ಗೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಸುಶೀಲಾ ಅವರಿಗೆ ಸೂಚಿಸಿತ್ತು. ಬಳಿಕ ಕಾರ್ಯದರ್ಶಿ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯಡಿ ಚರಂಡಿ ನಿರ್ಮಿಸಿ, ಶುಚಿತ್ವ ಕಾಯ್ದುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಅ.26ರಂದು ಮಂಡ್ಯ ತಾಪಂ ಇಒಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬೂದನೂರು ಗ್ರಾಮ ಪಂಚಾಯಿತಿಯಿಂದ ಚಂದ್ರಶೇಖರ್ ಮನೆ ಮುಂದೆ ಚರಂಡಿ ಕಾಮಗಾರಿ ಆರಂಭವಾಗಿದೆ.
    ಚರಂಡಿ ನಿರ್ಮಾಣಕ್ಕೆಂದು ನೈರ್ಮಲ್ಯ, ಕುಡಿಯುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾ ಪಂಚಾಯಿತಿಯ ಕುಂದುಕೊರತೆ ಪ್ರಾಧಿಕಾರದ ಮೊರೆ ಹೋದರೂ ಕೆಲಸ ಮಾಡಿಕೊಡದ ಕಾರಣ ಪ್ರಧಾನಮಂತ್ರಿ ಕಾರ್ಯಾಲಯದ ಮೊರೆ ಹೋಗಿದ್ದೆ. ಇದರಿಂದ ನ್ಯಾಯ ದೊರಕಿದೆ. ಜನಸಾಮಾನ್ಯರ ಸಮಸ್ಯೆಗೆ ಪಿಎಂ ಕಾರ್ಯಾಲಯ ಸ್ಪಂದಿಸಿರುವುದು ಖುಷಿ ವಿಚಾರ ಎಂದು ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts