ಮದ್ದೂರು: ಬರವನ್ನು ಸಮರ್ಥವಾಗಿ ಎದುರಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ಮೇ 4ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಪಿ ಕಾರ್ಡ್ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆ ವತಿಯಿಂದ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ನ.ಲಿ.ಕೃಷ್ಣ ತಿಳಿಸಿದ್ದಾರೆ.
ಭೀಕರ ಬರಗಾಲದಿಂದಾಗಿ ಕಬ್ಬು, ಭತ್ತ, ರಾಗಿ, ಬಾಳೆ ಬೆಳೆ ಒಣಗಿದೆ. ದೀರ್ಘಕಾಲದ ಬೆಳೆಗಳಾದ ತೆಂಗು, ಅಡಕೆ ಬೆಳೆಗಳೂ ಒಣಗಿ ಹೋಗಿವೆ. ಇದರಿಂದ ರೈತರ ಜೀವನದ ಮೇಲೆ ಆಘಾತಕಾರಿ ಪರಿಣಾಮ ಬೀರಿದೆ ಎಂದು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಹೈನುಗಾರಿಕೆ, ರಾಸುಗಳಿಗೆ ಮೇವು, ನೀರಿನ ಕೊರತೆ ಉಂಟಾಗಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಜತೆಗೆ ಬರ ಪರಿಹಾರ ಭರದಿಂದ ಸಾಗಬೇಕು ಎಂದು ಆಗ್ರಹಿಸಿ ಸರ್ಕಾರಗಳ ಗಮನ ಸೆಳೆಯಲು ಸಭೆ ಕರೆಯಲಾಗಿದೆ. ಪ್ರಗತಿ ಪರ ಸಂಘಟನೆಯ ಪ್ರಧಾನ ಸಂಚಾಲಕ ವಿ.ಸಿ.ಉಮಾಶಂಕರ್, ರೈತ ಸಂಘದ ಮುಖಂಡ ಸೊ.ಶಿ.ಪ್ರಕಾಶ್ ಇತರರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.