More

    ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಕೈಗಾರಿಕೆಗಳು ಯಾಕೆ ಬಂದಿಲ್ಲ?

    lದಾವಣಗೆರೆ : ಜಿಲ್ಲೆಯಲ್ಲಿ ಮೂರು ದಶಕಗಳಿಂದಲೂ ಸುಸಜ್ಜಿತ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು, ಹೈಟೆಕ್ ಶಾಲೆಗಳು ಹಾಗೂ ದೊಡ್ಡ ಕೈಗಾರಿಕೆಗಳು ಯಾಕೆ ಬಂದಿಲ್ಲ? ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಪ್ರಶ್ನಿಸಿದರು.
     ಜಿಲ್ಲೆಯ ಹೊನ್ನಾಳಿ-ನ್ಯಾಮತಿ ತಾಲೂಕಿನ ಸಾಗರಪೇಟೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
     ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು 35 ವರ್ಷದಿಂದ ಶಾಸಕರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ದೊಡ್ಡ ಕೈಗಾರಿಕೆ ತಂದಿಲ್ಲ. ಹೈಟೆಕ್ ಶಾಲೆಗಳನ್ನೂ ನಿರ್ಮಿಸಿಲ್ಲ. ಇನ್ನು ಜಿ.ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾಗಿದ್ದರೂ ಪ್ರಯೋಜನ ಮಾತ್ರ ಶೂನ್ಯ ಎಂದರು.
     ಅವಳಿ ತಾಲೂಕಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಕೆಲವು ಕಡೆ ಅಡಕೆ ಬೆಳೆಯಲಾಗುತ್ತದೆ. ತುಂಗಭದ್ರಾ ನದಿ ಹರಿಯುತ್ತಿದ್ದರೂ ಹಲವು ಹಳ್ಳಿಗಳಲ್ಲಿ ಸಮಸ್ಯೆಗಳಿವೆ. ನೀರಿಲ್ಲದೇ ರೈತರು ಪರದಾಡುತ್ತಿದ್ದಾರೆ. ಮಳೆ ಹೆಚ್ಚು ಬಂದರೆ ಪ್ರವಾಹ ತಲೆದೋರಿ ಮನೆಗಳಿಗೆ ನೀರು ನುಗ್ಗುತ್ತದೆ, ಜಮೀನುಗಳು ಜಲಾವೃತಗೊಳ್ಳುತ್ತವೆ. ಎಷ್ಟೋ ಹಳ್ಳಿಗಳಲ್ಲಿ ಸೇತುವೆಗಳು ನಿರ್ಮಾಣ ಆಗಿಲ್ಲ. ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಆಗದ ಸ್ಥಿತಿಯಿದೆ ಎಂದರು.
     ಚುನಾವಣೆ ಬಂದಾಗ ಎಲ್ಲರೂ ನಿಮ್ಮ ಬಳಿ ಬಂದು ಭರವಸೆ ಕೊಡುತ್ತಾರೆ. ಗೆದ್ದ ನಂತರ ಮತ್ತೆ ಬರುವುದು ಮುಂದಿನ ಚುನಾವಣೆಗೆ. ಸಮಸ್ಯೆಗಳ ಸುಳಿಯಲ್ಲಿ ಬದುಕುವುದಕ್ಕಿಂತ ಸ್ವಾಭಿಮಾನಿಗಳಾಗಿ ಅಭಿವೃದ್ಧಿಗೆ ಕೈಜೋಡಿಸೋಣ. ಅಧಿಕಾರಕ್ಕಾಗಿ ಚುನಾವಣೆಗೆ ನಿಲ್ಲುವವರಿಗೆ ತಕ್ಕ ಪಾಠ ಕಲಿಸೋಣ ಎಂಬ ಶಪಥ ಮಾಡಿ. ಭರವಸೆ ಕೊಡುವವರಿಗೆ ಮತ ಕೊಡಬೇಡಿ, ಕೆಲಸ ಮಾಡುವವರಿಗೆ ಒಂದು ಅವಕಾಶ ಕೊಡಿ. ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಹುಡುಕಿಕೊಂಡು ಬರುವಂತೆ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
     ದೇಶಾದ್ಯಂತ ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಆರಂಭಿಸಿದ್ದೇನೆ. ಎಷ್ಟೋ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ಸಾವಿರಾರು ಐಎಎಸ್, ಐಪಿಎಸ್ ಅಧಿಕಾರಿಗಳು ದೇಶಾದ್ಯಂತ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳೂ ಈ ಸ್ಥಾನಕ್ಕೆ ಹೋಗಬೇಕು. ಈ ಜವಾಬ್ದಾರಿ ನನಗೆ ನೀಡಿ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರೆ ಎಲ್ಲವೂ ಸಾಧ್ಯವಾಗುವಂತೆ ಮಾಡಿ ತೋರಿಸುತ್ತೇನೆ ಎಂದರು.
     ಜಿಲ್ಲೆಯ ಜನರು ತುಂಬಾ ಸ್ವಾಭಿಮಾನಿಗಳು. ನೀವು ಚಲಾಯಿಸುವ ಒಂದೊಂದು ಮತವೂ ಅಮೂಲ್ಯ. ನನಗೆ ಮತ ನೀಡಿದರೆ ಜೀವನ ಬದಲಾಗುವಂತೆ ಮಾಡುವ ಕರ್ತವ್ಯ ನನ್ನದು. ನಾನು ಕೇವಲ ಭರವಸೆ ಕೊಟ್ಟು ಹೋಗುವವನಲ್ಲ. ನಿಮ್ಮ ಮಧ್ಯೆಯೇ ಇದ್ದು ಸೇವೆ ಮಾಡಲು ಬಂದಿರುವೆ.ಭರವಸೆ ಕೊಡುವವರಿಗೆ ಮತ ಕೊಡಬೇಡಿ, ಕೆಲಸ ಮಾಡುವವರಿಗೆ ಒಂದು ಅವಕಾಶ ಕೊಡಿ ಎಂದು ಕೋರಿದರು.
     ಸಾಗರಪೇಟೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts