More

    ಈಜುಕೊಳಗಳಿಗೆ ಬಂದೈತೆ ಸುಗ್ಗಿಕಾಲ ಅಂತಾರಾಷ್ಟ್ರೀಯ ಪೂಲ್‌ನಲ್ಲಿ ನಿತ್ಯ ಯುವಕರ ದಂಡು    ಕೋಚ್ ಗಳಿಗೂ ಸಂತಸ ತಂದ ಬಿಸಿಲು

    ಡಿ.ಎಂ.ಮಹೇಶ್, ದಾವಣಗೆರೆ
    ಈಜು ಎಲ್ಲ ಆರೋಗ್ಯ ಚಟುವಟಿಕೆಗಳ ತಾಯಿ. ಮಳೆ ಮರೀಚಿಕೆಯಾದ ದಾವಣಗೆರೆಯಲ್ಲಿ 38-40 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣಾಂಶದಿಂದ ಜನಜೀವನ ತತ್ತರವಾಗಿದ್ದರೆ, ಇದೇ ಬಿಸಿಲು ಈಜುಕೊಳಗಳಿಗೆ ವರವಾಗಿದೆ.  
     ದೇವರಾಜ ಅರಸು ಬಡಾವಣೆಯ ಉನ್ನತೀಕರಿಸಿದ ಅಂತಾರಾಷ್ಟ್ರೀಯ ಈಜುಕೊಳ, ಎಂಸಿಸಿ ಬಿ ಬ್ಲಾಕ್‌ನ ಗಾಂಜಿವೀರಪ್ಪ ಸಾರ್ವಜನಿಕ ಕೊಳ ಸೇರಿ ನಗರದಲ್ಲಿ ಎರಡು ಪೂಲ್‌ಗಳಿವೆ. ಎರಡೂ ಸೇರಿ ದಿನವೊಂದಕ್ಕೆ 800- 1000 ಸಂಖ್ಯೆಯ ಈಜುಪಟುಗಳು ಬರುತ್ತಿದ್ದಾರೆ.
    ಈಜು ಕಲಿಸಲು 2 ವರ್ಷದ ಪೋರರನ್ನು ಪಾಲಕರು ಕರೆ ತಂದರೆ, 60 ವರ್ಷ ಮೇಲ್ಪಟ್ಟವರೂ ಈಜುವ ಖಯಾಲಿಗಾಗಿ ಬರುವವರಿದ್ದಾರೆ. ಈಜುಗಾರರು ಬಂದಷ್ಟೂ ತರಬೇತುದಾರರಲ್ಲದೆ, ಲೈಫ್ ಗಾರ್ಡ್ಸ್, ಸ್ವಚ್ಛತಾಗಾರರು, ಭದ್ರತಾ ಸಿಬ್ಬಂದಿಯ ಮುಖದಲ್ಲೂ ಸಂತಸ ಅರಳುವ ಸಮಯವಿದು. ಹೀಗಾಗಿ ಈ ಕೊಳಗಳಿಗೀಗ ಸುಗ್ಗಿ ಕಾಲ!
    ದೇವರಾಜ ಅರಸು ಬಡಾವಣೆಯ ಉನ್ನತೀಕರಿಸಿದ ಅಂತಾರಾಷ್ಟ್ರೀಯ ಈಜುಕೊಳದತ್ತ ದಾವಿಸುವ ಯುವಕರ ದಂಡು ಹೆಚ್ಚಿದೆ. ವಾರಾಂತ್ಯಗಳಲ್ಲಂತೂ ಅವರನ್ನು ನಿಯಂತ್ರಿಸುವುದೇ ಅಲ್ಲಿನ ಸಿಬ್ಬಂದಿಗೆ ಹರಸಾಹಸದ ಕೆಲಸ.
    ನೀರಿನ ಹಾಹಾಕಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕೊಳದಲ್ಲಿ ನಿರೀಕ್ಷೆೆಗಿಂತ ನಾಲ್ಕಡಿ ನೀರಿನ ಪ್ರಮಾಣ ತಗ್ಗಿಸಲಾಗಿದೆ. 15-20 ಅಡಿ ಉದ್ದಗಲದ ಈ ಪೂಲ್‌ನಲ್ಲಿ 4ರಿಂದ 16 ಅಡಿ ಆಳದವರೆಗೆ ಸ್ಲೋಪ್ ಇದೆ. ಆಳ ಹೆಚ್ಚಿದ ಕಡೆಯಲ್ಲಿ ಪರಿಣತ ಈಜುಪಟುಗಳಿಗಷ್ಟೇ ಪ್ರವೇಶ!  2 ಅಡಿ ಎತ್ತರದ ಬೇಬಿಪೂಲ್‌ನಲ್ಲಿ ಚಿಣ್ಣರಿಗೆ ಈಜು ಕಲಿಸಲು ಪಾಲಕರೂ ದಾಂಗುಡಿ ಇಡುತ್ತಾರೆ. ಒಮ್ಮೆ ಕೂಪನ್ ಪಡೆದವರಿಗೆ 45 ನಿಮಿಷದವರೆಗೆ ಕಾಲಾವಕಾಶವಿದೆ.
    ರಕ್ಷಣಾತ್ಮಕ ಸಹಿತ ಈಜು ಕಲಿಕೆಗೆ 40 ಲೈಫ್ ಜಾಕೆಟ್, 15 ರಬ್ಬರ್ ಟ್ಯೂಬ್ ವ್ಯವಸ್ಥೆ ಇಲ್ಲಿದೆ.  10 ವರ್ಷ ಮೇಲ್ಪಟ್ಟವರಿಗೆ 60 ರೂ.,   ಮಕ್ಕಳಿಗೆ ತಲಾ 40 ರೂ. ವಿಧಿಸಲಾಗುತ್ತಿದೆ. ಟೂಬ್, ಶಾರ್ಟ್‌ಗಳಿಗೆ ಪ್ರತ್ಯೇಕ ಶುಲ್ಕವಿದೆ. ಬೆಳಗ್ಗೆ 6ರಿಂದ 9ರವರೆಗೆ ಮೂರು ಅವಧಿಯಲ್ಲಿ ಈಜು ತರಬೇತಿ ನಡೆಯಲಿದೆ. ಈ ತರಬೇತಿಗೆ ಹೆಚ್ಚಿನ ಶುಲ್ಕವಿದೆ. ಫೆಬ್ರವರಿಯಿಂದ ಪ್ರತ್ಯೇಕ ಬ್ಯಾಚ್‌ಗಳನ್ನು ನಡೆಸಲಾಗುತ್ತಿದೆ.
    ಸಂಜೆ 7ರವರೆಗೆ ನಿತ್ಯ ಚಾಲನೆಯಲ್ಲಿರುವ ಈ ಈಜುಕೊಳದಲ್ಲಿ ಸಂಜೆ ವೇಳೆಗೆ ಹೆಣ್ಣುಮಕ್ಕಳಿಗೆ ವಿಶೇಷ ಈಜು ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಕೋಚ್ ಎಂ.ಎಸ್.ಲಿಂಗರಾಜ್. ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕೊಠಡಿ, ಶೌಚಗೃಹಗಳ ಸೌಲಭ್ಯ ಇಲ್ಲಿದೆ.
    ಈಜುಕೊಳದ ನೀರು ಕಾಲಕಾಲಕ್ಕೆ ಶುದ್ಧೀಕರಿಸಲು 6 ಕ್ಲೋರಿನ್ ಸಿಲಿಂಡರ್ ಇರಿಸಲಾಗಿದೆ. ಎರಡು ಕೊಳವೆಬಾವಿಗಳ ಪೈಕಿ ಒಂದರಲ್ಲಿ ಜೀವವಿಲ್ಲ. ನೀರೆತ್ತಲು 10ಎಚ್‌ಪಿಯ ಐದು ಮೋಟಾರ್ ಇವೆ. ಸೋಲಾರ್ ರೂಫ್ ವ್ಯವಸ್ಥೆ ಇದುವರೆಗೆ ಸಾಧ್ಯವಾಗದ್ದರಿಂದ ವಿದ್ಯುತ್ ವೆಚ್ಚವೇ ಅಧಿಕವಾಗಿದೆ ಎಂಬುದು ಇಲ್ಲಿನ ನಿರ್ವಾಹಕರ ಕೊರಗು.

    ನಮ್ಮ ಈಜುಕೊಳದಲ್ಲಿ ಇಬ್ಬರು ಕೋಚ್‌ಗಳಿದ್ದಾರೆ. ಕೊಳದಲ್ಲಿ ನೀರಿನ ಮಟ್ಟ ಹೆಚ್ಚಿದಂತೆ ಈಜುಪಟಗಳು ಹೆಚ್ಚಲಿದ್ದಾರೆ. ನಮ್ಮಲ್ಲಿ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ.
    ಸದಾನಂದ ವಾಗಲೆ
    ಅಂತಾರಾಷ್ಟ್ರೀಯ ಈಜುಕೊಳದ ನಿರ್ವಹಣಾ ಗುತ್ತಿಗೆದಾರ.

    ಆರು ತಿಂಗಳಿಂದ ಕೊಳಕ್ಕೆ ಬರುತ್ತಿದ್ದೇನೆ. ನಾನು ಈಜುವ ಜತೆಯಲ್ಲೇ ಎರಡೂವರೆ ವರ್ಷದ ಮನ್ವಿತಾಗೂ ಇಲ್ಲಿಯೇ ಈಜು ಕಲಿಸುತ್ತಿದ್ದೇನೆ. ಈಜು ಬಾರದವರು ಲೈಫ್ ಜಾಕೆಟ್ ಧರಿಸಿ ಕೊಳಕ್ಕಿಳಿಯಲು ಗಮನ ಹರಿಸಬೇಕು.
    ಎಲ್.ವಿನಯ್‌ಕುಮಾರ್
    ಈಜುಪಟು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts