

RCB: ನಿನ್ನೆ (ಏ.10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಪಡೆ ಭರ್ಜರಿ ಜಯ ಸಾಧಿಸಿತು. 6 ವಿಕೆಟ್ಗಳಿಂದ ಗೆದ್ದು ಬೀಗಿದ ಡಿಸಿ ತಂಡಕ್ಕೆ ಕನ್ನಡಿಗ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ದೊಡ್ಡ ಮಟ್ಟದ ಸಂಭ್ರಮಕ್ಕೆ ಕಾರಣವಾಯಿತು. ಇನ್ನು ಈ ಪಂದ್ಯದ ಸೋಲಿನ ಮೂಲಕ ಎರಡನೇ ಬಾರಿ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದ ರಜತ್ ಪಟಿದಾರ್ ಪಡೆಗೆ, ತವರಿನಲ್ಲೇ ಯಾಕೋ ಅದೃಷ್ಟವಿಲ್ಲ ಎಂಬಂತೆ ಕಂಡುಬಂದಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಓಪನಿಂಗ್ ಬಂದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಮೊದಲೆರೆಡು ಓವರ್ನಲ್ಲೇ ಅಬ್ಬರದ ಬ್ಯಾಟಿಂಗ್ ನಡೆಸಿ, ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿತು. ಸಾಲ್ಟ್ ಅಬ್ಬರದ ಬ್ಯಾಟಿಂಗ್ ಬೆನ್ನಲ್ಲೇ ವಿರಾಟ್ ಕೂಡ ತಮ್ಮ ಬ್ಯಾಟ್ನಿಂದ ಅದ್ಭುತ ರನ್ಗಳ ಮಳೆ ಹರಿಸಲು ಶುರುಮಾಡಿದರು. ಇನ್ನೇನು ತಂಡದ ಮೊತ್ತ 200ರ ಗಡಿದಾಟಲಿದೆ ಎಂಬ ಲೆಕ್ಕಾಚಾರಗಳು ಮುನ್ನೆಲೆಗೆ ಬರುವ ಮುನ್ನವೇ ಫಿಲ್ ರನ್ಔಟ್ ಆಗಿ ಪೆವಿಲಿಯನ್ಗೆ ಮರಳಿದರು.
ಈ ವಿಚಾರವನ್ನು ಮುಂದಿಟ್ಟು ವಿರಾಟ್ ಕೊಹ್ಲಿಯನ್ನು ಟೀಕಿಸಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, "ವಿಪ್ರಾಜ್ ನಿಗಮ್ ಅವರ ಬೌಲಿಂಗ್ನಲ್ಲಿ ವಿರಾಟ್ ದೊಡ್ಡ ತಪ್ಪನ್ನು ಮಾಡಿದರು. ಆ ಶಾಟ್ ಅವರು ಆಡಲೇ ಬಾರದಿತ್ತು. ಸ್ಪಿನ್ನರ್ ಎದುರು ಕೊಹ್ಲಿ ಸಿಲುಕಿದರು. ಇದರೊಟ್ಟಿಗೆ ಫಿಲ್ರನ್ನು ರನ್ ಔಟ್ ಕೂಡ ಮಾಡಿಸಿದರು. ಫಿಲ್ ವಿಕೆಟ್ ಹೋದ ನಂತರ ಅವರಾದರೂ ಆಡಬಹುದಿತ್ತು. ಆದ್ರೆ, ಅಲ್ಲಿಯೂ ವಿಕೆಟ್ ಕಳೆದುಕೊಂಡರು. ಆ ರನ್ಔಟ್ ಆದ ನಂತರ ವಿರಾಟ್ ಆ ಆಟದಲ್ಲಿ ಇರಲಿಲ್ಲ" ಎಂದು ಸೆಹ್ವಾಗ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).