ಟೀಮ್ ಇಂಡಿಯಾಗೆ ದಿಗ್ಬಂಧನ?: ಆಸೀಸ್ ಪ್ರವಾಸದ ವೇಳೆ ಕ್ವಾರಂಟೈನ್​ನಲ್ಲಿಡಲು ಯೋಜನೆ

Australia
Published on

ಮೆಲ್ಬೋರ್ನ್: ಮಾರಕ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದ ನಂತರದಲ್ಲಿ ಭಾರತ ತಂಡ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ, ಪ್ರವಾಸಿ ತಂಡವನ್ನು ಅಡಿಲೇಡ್ ಓವಲ್​ನ ಹೊಸ ಹೋಟೆಲ್​ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್​ನಲ್ಲಿಡಲು ಯೋಜನೆ ರೂಪಿಸಲಾಗುತ್ತಿದೆ.

’ದಿ ಏಜ್’ ವರದಿಯ ಪ್ರಕಾರ, ದಕ್ಷಿಣ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆಯ (ಎಸ್​ಎಸಿಎ) ಮುಖ್ಯಸ್ಥ ಕೀತ್ ಬ್ರಾಡ್ ಷಾ ಈ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ಜತೆ ಮಾತುಕತೆ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಬಳಗ ನಿಗದಿಯಂತೆಯೇ ಪ್ರವಾಸ ಕೈಗೊಂಡರೆ, 323 ಕೋಟಿ ರೂ. ವೆಚ್ಚದ ನೂತನ ಹೋಟೆಲ್​ನಲ್ಲಿ ಸ್ವಯಂ ದಿಗ್ಬಂಧನದ ವ್ಯವಸ್ಥೆ ಕಲ್ಪಿಸುವ ಆಫರ್ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಈಗ 6 ತಿಂಗಳ ಕಾಲ ವಿದೇಶಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು, ಇದು ಸೆಪ್ಟೆಂಬರ್​ವರೆಗೂ ಜಾರಿಯಲ್ಲಿರುತ್ತದೆ. ನಂತರದಲ್ಲೂ ಸರಣಿಯನ್ನು ನಿಗದಿಯಂತೆ ಆಡಲು ಭಾರತ ತಂಡ ಆಡಲು ಮುಂದಾದರೂ, ಆರೋಗ್ಯ ಮತ್ತು ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಭಾರತ ತಂಡ ಪ್ರವಾಸದ ಆರಂಭದಲ್ಲಿ ಆಸೀಸ್ ನೆಲದಲ್ಲಿ 14 ದಿನಗಳ ಐಸೋಲೇಷನ್​ನಲ್ಲಿರುವುದು ಕಡ್ಡಾಯವಾಗಿರುತ್ತದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net