

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಡೀಪ್ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಂತ್ರಜ್ಞಾನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬರೀ ಸಿನಿಮಾ ಹಾಗೂ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳಿಗೆ ಸೀಮಿತವಾಗಿದ್ದ ಡೀಪ್ಫೇಕ್ ತಂತ್ರಜ್ಞಾನವು ಇದೀಗ ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಿದ್ದು, ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಬಗ್ಗೆ ಮಾತನಾಡಿಕೊಂಡಿದ್ದು, ಶುಭಮನ್ ಗಿಲ್ರನ್ನು ನಿಂದಿಸಿದ್ದಾರೆ. ನಾನು ಗಿಲ್ ಅವರನ್ನು ನೋಡುತ್ತಿದ್ದೇನೆ. ಗಿಲ್ ಖಂಡಿತವಾಗಿಯೂ ಪ್ರತಿಭಾವಂತ ಆಟಗಾರ. ಆದರೆ ಭವಿಷ್ಯದ ಆಟಗಾರನಾಗಿ ಭರವಸೆಯನ್ನು ತೋರಿಸುವುದಕ್ಕೂ ಮತ್ತು ದಂತಕಥೆಯಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಗಿಲ್ ಮುಂದಿನ ವಿರಾಟ್ ಕೊಹ್ಲಿಯಾಗಲು ಸಾಧ್ಯವಿಲ್ಲ ಎಂದು ವಿರಾಟ್ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ.
ಇದನ್ನು ನೋಡುವುದಾದರೆ ಕೊಹ್ಲಿ ತಮ್ಮ ಬಗ್ಗೆ ಹೆಚ್ಚು ಮಾತನಾಡಿದ್ದು, ಶುಭಮನ್ ಗಿಲ್ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವುದನ್ನು ನೋಡಬಹುದಾಗಿದೆ. ಆರಂಭದಲ್ಲಿ ಇದು ನಿಜ ಎಂದು ಎಲ್ಲರೂ ನಂಬಿದರಾದರೂ ಆ ನಂತರ ಇದು ಡೀಪ್ಫೇಕ್ ಬಳಸಿ ಮಾಡಲಾಗಿರುವ ವಿಡಿಯೋ ಎಂದು ತಿಳಿದು ಜನ ಕಿಡಿಕಾರಿದ್ದಾರೆ. ಈ ಸಂಬಂಧ ಹಲವರು ಈ ರೀತಿಯ ಫೇಕ್ ವಿಡಿಯೋಗಳನ್ನು ಮಾಡಿ ಹರಿಬಿಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.