

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷ ಪೂರೈಸಿದ ಸಂಭ್ರಮ ಕಂಡರು. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್ಮನ್ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಕಳೆದ 15 ವರ್ಷಗಳಲ್ಲಿ ಭಾರತ ತಂಡದ ಪರ ಮೂರೂ ಪ್ರಕಾರಗಳಲ್ಲಿ ಒಟ್ಟು 501 ಪಂದ್ಯ ಆಡಿರುವ ಕೊಹ್ಲಿ, ಈ ವೇಳೆ ರನ್ ಗಳಿಕೆಗಾಗಿ ವಿಕೆಟ್ ನಡುವೆ ಸುಮಾರು 510.04 ಕಿಲೋಮೀಟರ್ ದೂರ ಓಡಿದ್ದಾರೆ!
34 ವರ್ಷದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೆ ಒಟ್ಟಾರೆ 25,582 ರನ್ ಸಿಡಿಸಿದ್ದಾರೆ. ಈ ಪೈಕಿ ಬೌಂಡರಿ&ಸಿಕ್ಸರ್ಗಳ ಹೊರತಾಗಿ 13,748 ರನ್ಗಳನ್ನು 22 ಯಾರ್ಡ್ (20.1168 ಮೀ) ಪಿಚ್ ನಡುವಿನ ಓಟದಿಂದಲೇ ಕಲೆಹಾಕಿದ್ದಾರೆ. ಇದಕ್ಕಾಗಿ ಅವರು ಒಟ್ಟು 276.57 ಕಿಲೋಮೀಟರ್ ದೂರ ಓಡಿದ್ದಾರೆ. ಇದೇ ವೇಳೆ ತನ್ನ ಬ್ಯಾಟಿಂಗ್ ಜತೆಗಾರರ 11,606 ರನ್ಗಳಿಗೂ ಕೊಹ್ಲಿ 233.48 ಕಿಲೋಮೀಟರ್ ದೂರ ಓಡಿದ್ದಾರೆ.
ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್ ಗಂಭೀರ್ ಜತೆಗೆ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್ ಗಳಿಸಿದ್ದರು. ಭಾರತ ತಂಡ 146 ರನ್ಗೆ ಆಲೌಟ್ ಆಗಿದ್ದ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲು ಕಂಡಿತ್ತು. ಕೊಹ್ಲಿ ಇದುವರೆಗೆ 111 ಟೆಸ್ಟ್, 275 ಏಕದಿನ ಮತ್ತು 115 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 8676, 12898 ಮತ್ತು 4008 ರನ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ 29, ಏಕದಿನದಲ್ಲಿ 46 ಮತ್ತು ಟಿ20ಯಲ್ಲಿ 1 ಶತಕಗಳ ಸಹಿತ ಒಟ್ಟು 76 ಶತಕ ಸಿಡಿಸಿದ್ದಾರೆ.
83 ಸ್ಟೇಡಿಯಂಗಳಲ್ಲಿ ಆಟ
ವೃತ್ತೀಜಿವನದಲ್ಲಿ ವಿಶ್ವದೆಲ್ಲೆಡೆ 83 ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಡಿರುವ ಕೊಹ್ಲಿ ಈ ಪೈಕಿ 46 ತಾಣಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಪೈಕಿ ಅಡಿಲೇಡ್ನಲ್ಲಿ ಗರಿಷ್ಠ 5 ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ 53 ಸ್ಟೇಡಿಯಂಗಳಲ್ಲಿ ಶತಕ ಸಿಡಿಸಿರುವುದು ವಿಶ್ವದಾಖಲೆ ಎನಿಸಿದೆ. ಕೊಹ್ಲಿ ಏಕದಿನ ಪಂದ್ಯ ಆಡಿರುವ ಎಲ್ಲ 9 ದೇಶಗಳಲ್ಲೂ ಕನಿಷ್ಠ ಒಂದಾದರೂ ಶತಕ ಸಿಡಿಸಿದ್ದಾರೆ. ಟೆಸ್ಟ್ನಲ್ಲೂ ಬಾಂಗ್ಲಾದೇಶ ಹೊರತಾಗಿ ಉಳಿದ 8 ದೇಶಗಳಲ್ಲಿ ಶತಕ ಸಿಡಿಸಿದ್ದಾರೆ.
ಸಚಿನ್ ದಾಖಲೆ ಸನಿಹ
ಸಚಿನ್ ತೆಂಡುಲ್ಕರ್ ಅವರ ಶತ ಶತಕಗಳ ಸಾಧನೆಯಿಂದ ಇನ್ನೂ 24 ಶತಕ ದೂರವಿರುವ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ 49 ಶತಕ ಸಿಡಿಸಿದ ಸಚಿನ್ ದಾಖಲೆಯನ್ನು ಮುಂದಿನ 3 ತಿಂಗಳಲ್ಲಿ ಏಷ್ಯಾಕಪ್&ವಿಶ್ವಕಪ್ ವೇಳೆ ಮುರಿಯುವ ನಿರೀೆ ಇದೆ. ಸಚಿನ್ ಸಾಧನೆಯಿಂದ ಕೊಹ್ಲಿ (46) ಸದ್ಯ ಕೇವಲ 3 ಶತಕ ಹಿಂದಿದ್ದಾರೆ.