ಇಮ್ರಾನ್​ ಹಶ್ಮಿಗೆ ಲಿಪ್ಸ್​... ವಿರಾಟ್​ ಕೊಹ್ಲಿಗೆ ಸ್ಲಿಪ್ಸ್! ಹಿಗ್ಗಾಮುಗ್ಗಾ ಟ್ರೋಲ್​ ಆದ ರನ್​ ಮೆಷಿನ್ Virat Kohli

Virat Kohli
Published on

Virat Kohli : ಬಾರ್ಡರ್ ಗವಾಸ್ಕರ್​ ಟ್ರೋಫಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ಇಂದಿನಿಂದ (ಜ.03) ಸಿಡ್ನಿಯಲ್ಲಿ ಪ್ರಾರಂಭವಾಗಿದೆ. ಈ ಪಂದ್ಯದಿಂದ ರೋಹಿತ್ ಶರ್ಮ ಹಿಂದೆ ಸರಿದಿದ್ದು, ಜಸ್​ಪ್ರೀತ್​ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದಾರೆ. ಟಾಸ್ ಗೆದ್ದ ಬುಮ್ರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕಳೆದ ಮೂರು ಟೆಸ್ಟ್‌ ಪಂದ್ಯಗಳಂತೆ ಸಿಡ್ನಿ ಟೆಸ್ಟ್‌ನಲ್ಲೂ ಭಾರತದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಪಂದ್ಯದ ಆರಂಭದಿಂದಲೇ ಭಾರತ ಸತತವಾಗಿ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್​ನಲ್ಲಿ 72.2 ಓವರ್​ಗಳಲ್ಲಿ 185 ರನ್​ಗೆ ಆಲೌಟ್​ ಆಯಿತು.

ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ರಿಷಭ್​ ಪಂತ್​ 40 ರನ್​ ಗಳಿಸಿದ್ದನ್ನು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಉತ್ತಮ ನಿರ್ವಹಣೆ ತೋರಲಿಲ್ಲ. ಯಶಸ್ವಿ ಜೈಸ್ವಾಲ್ (10), ಕೆಎಲ್ ರಾಹುಲ್ (4), ಶುಭಮನ್ ಗಿಲ್ (20), ವಿರಾಟ್ ಕೊಹ್ಲಿ (17), ರವೀಂದ್ರ ಜಡೇಜಾ (26) ಮತ್ತು ನಿತೀಶ್ ಕುಮಾರ್ ರೆಡ್ಡಿ (0) ವಿಫಲರಾದರು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಒಮ್ಮೆ ಅದೃಷ್ಟ ಕೈಹಿಡಿದಿತ್ತು. ಔಟಾಗದೆ ಪಾರಾದರೂ ಎಚ್ಚರಿಕೆಯ ಆಟವಾಡಿ ರನ್ ಗಳಿಸುವಲ್ಲಿ ವಿಫಲರಾದರು. ಈ ಸರಣಿಯ ಆರಂಭದಿಂದಲೂ ಕೊಹ್ಲಿ ರನ್ ಗಳಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಇದರಿಂದಾಗಿ ಕೊಹ್ಲಿ ಪ್ರದರ್ಶನದ ಬಗ್ಗೆ ಭಾರತದ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಹೀಗಾಗಿ ಸಿಡ್ನಿ ಟೆಸ್ಟ್‌ನಲ್ಲಾದರೂ ಕೊಹ್ಲಿ ಕ್ರೀಸ್‌ನಲ್ಲಿ ಬೇರೂರಿ, ರನ್ ಗಳಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ನಿರಾಸೆ ಮೂಡಿಸಿದ್ದಾರೆ.

ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಮೊದಲ ಎಸೆತದಲ್ಲಿಯೇ ಔಟ್​ ಆಗುವುದರಿಂದ ಪಾರಾದರು. ಸ್ಕಾಟ್ ಬೋಲ್ಯಾಂಡ್ ಓವರ್​ನಲ್ಲಿ ಕ್ರೀಸ್​ಗೆ ಬಂದ ವಿರಾಟ್, ಮೊದಲ ಎಸೆತದಲ್ಲೇ ಚೆಂಡು ಕೊಹ್ಲಿಯ ಬ್ಯಾಟಿನ ಅಂಚಿಗೆ ಬಡಿದು ಸ್ಲಿಪ್ ವಿಭಾಗದಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಕಡೆಗೆ ಹಾರಿಹೋಯಿತು. ಈ ವೇಳೆ ಸ್ಮಿತ್ ಡೈವ್ ಮಾಡಿ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ, ಸ್ಮಿತ್ ಅವರು​ ಚೆಂಡನ್ನು ತಮ್ಮ ಬೆರಳುಗಳಿಂದ ಗಾಳಿಗೆ ಎಸೆದರು. ಇದರೊಂದಿಗೆ ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮತ್ತೊಬ್ಬ ಫೀಲ್ಡರ್ ಚೆಂಡನ್ನು ಹಿಡಿದರು. ಆದರೆ, ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಏಕೆಂದರೆ, ಚೆಂಡು ನೆಲಕ್ಕೆ ತಾಗಿದ್ದನ್ನು ರಿಪ್ಲೇ ತೋರಿಸಿತು. ಹೀಗಾಗಿ ಕೊಹ್ಲಿ ಔಟಾಗದೆ ಸ್ವಲ್ಪದರಲ್ಲೇ ಪಾರಾದರು.

ಬಳಿಕ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್‌ ಮೂಲಕ ರನ್‌ ಗಳಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಬೋಲ್ಯಾಂಡ್ (31.3ನೇ ಓವರ್) ಎಸೆದ ಚೆಂಡನ್ನು ಆಡಲು ಕೊಹ್ಲಿ ಯತ್ನಿಸಿದರು. ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಮತ್ತೆ ಸ್ಲಿಪ್‌ಗೆ ಹೋಯಿತು. ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೆಬ್​ಸ್ಟರ್ ಕ್ಯಾಚ್ ಪಡೆದರು. 69 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕೇವಲ 17 ರನ್ ಗಳಿಸಿ ಪೆವಿಲಿಯನ್​ಗೆ ತೆರಳುವ ಮೂಲಕ ಎಲ್ಲರಲ್ಲೂ ನಿರಾಸೆ ಮೂಡಿಸಿದರು.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ, ವಿರಾಟ್ ಕೊಹ್ಲಿ ಆಫ್ ಸ್ಟಂಪ್ ಹೊರಗೆ ಚೆಂಡನ್ನು ಆಡಲು ಪ್ರಯತ್ನಿಸಿ, ಏಳು ಬಾರಿ ಔಟಾಗಿದ್ದಾರೆ. ಪ್ರತಿ ಬಾರಿಯೂ ಸ್ಲಿಪ್‌ನಲ್ಲೇ ಕೊಹ್ಲಿ ಔಟಾಗುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಹೀರೋ ಇಮ್ರಾನ್ ಹಶ್ಮಿ ತಮ್ಮ ಸಿನಿಮಾಗಳಲ್ಲಿ ನಾಯಕಿಯರ ತುಟಿಗಳನ್ನು ಇಷ್ಟಪಡುವಂತೆ, ಕೊಹ್ಲಿಯು ಕ್ರಿಕೆಟ್‌ನಲ್ಲಿ ಸ್ಲಿಪ್‌ಗಳನ್ನು ಇಷ್ಟಪಟ್ಟಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಂತಹ ಎಸೆತಗಳನ್ನು ಬಿಟ್ಟುಬಿಡುವುದನ್ನು ಮಾಜಿ ನಾಯಕ ಎಂಎಸ್ ಧೋನಿಯಿಂದ ಕೊಹ್ಲಿ ಕಲಿಯಬೇಕಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ.

Virat Kohli 1

ಮೊದಲ ದಿನದಾಟದ ಅಂತ್ಯಕ್ಕೆ ಭಾರತ 185 ರನ್​ಗಳಿಗೆ ಆಲೌಟ್​ ಆಗಿದ್ದು, ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 9 ರನ್​ಗೆ 1 ವಿಕೆಟ್​ ಕಳೆದುಕೊಂಡಿದೆ. 2 ರನ್​ ಗಳಿಸಿ ಉಸ್ಮಾನ್​ ಖವಾಜ ಔಟಾಗಿದ್ದು, ಸ್ಯಾಮ್​ ಕೋನ್​ಸ್ಟಸ್​ 7 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net