

ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮಾ 36ನೇ ವಸಂತಕ್ಕೆ ಕಾಲಿರಿಸಿದ್ದು, ಮೇ 1 ಬುಧವಾರ ಆಕೆಯ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಸ್ನೇಹಿತರ ಜೊತೆ ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಅದ್ದೂರಿಯಾಗಿ ಡಿನ್ನರ್ ಪಾರ್ಟಿ ಮಾಡಿದರು.
ಪತ್ನಿಯ ಹುಟ್ಟಿದ ದಿನದ ಸಂಭ್ರಮಾಚರಣೆಯ ಫೋಟೋಗಳನ್ನು ವಿರಾಟ್ ಈಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅದ್ದೂರಿ ಉಪಾಹಾರ ಗೃಹ ಲುಪಾದಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ವಿರಾಟ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಇದರ ಫೋಟೋ ಪೋಸ್ಟ್ ಮಾಡಿದ್ದಾರೆ.
'ಅನುಷ್ಕಾ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಸವಿಭೋಜನ ಒದಗಿಸಿದ್ದಕ್ಕೆ ಹೋಟೆಲ್ ಮುಖ್ಯಸ್ಥ ಮನು ಚಂದ್ರಗೆ ಧನ್ಯವಾದಗಳು. ನಮ್ಮ ಜೀವನದ ಅತ್ಯುತ್ತಮ ಆಹಾರ ಅನುಭವಗಳಲ್ಲಿ ಇದೂ ಒಂದಾಗಿದೆ' ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಮತ್ತೊಂದೆಡೆ, ಅನುಷ್ಕಾ ಗ್ರೂಪ್ ಫೋಟೋವನ್ನು ಮರು-ಶೇರ್ ಮಾಡಿದ್ದಾರೆ. ಈ ಫೋಟೋಗೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸ್ಸಿಸ್ ಪ್ರತಿಕ್ರಿಯಿಸಿದ್ದು, "ಒಳ್ಳೆಯ ಜನರೊಂದಿಗೆ ಉತ್ತಮ ರಾತ್ರಿ ಕಳೆಯಿರಿ..." ಎಂದಿದ್ದಾರೆ.
"ನಾನು ನಿನ್ನನ್ನು ನೋಡದಿದ್ದರೆ ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಜನ್ಮದಿನದ ಶುಭಾಶಯಗಳು, ಪ್ರಿಯೆ ನೀನು ನನ್ನ ಈ ಜಗತ್ತಿನಲ್ಲಿ ಬೆಳಕು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ." ಎಂದು ವಿರಾಟ್ ತನ್ನ ಪತ್ನಿಯ ಮೇಲಿನ ಪ್ರೀತಿಯನ್ನು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಮೊದಲ ಬಾರಿಗೆ 2013 ರಲ್ಲಿ ಶಾಂಪೂ ಬ್ರ್ಯಾಂಡ್ನ ಜಾಹೀರಾತಿನ ಚಿತ್ರೀಕರಣದಲ್ಲಿ ಭೇಟಿಯಾದರು. 2017 ರಲ್ಲಿ ಅವರು ಇಟಲಿಯಲ್ಲಿ ವಿವಾಹವಾದರು. ಅವರ ಮೊದಲ ಮಗು, ವಮಿಕಾ 2021 ರಲ್ಲಿ ಜನಿಸಿತು. ಅವರು ಈ ವರ್ಷದ ಆರಂಭದಲ್ಲಿ ತಮ್ಮ ಎರಡನೇ ಮಗುವಿನ ಜನನವನ್ನು ಘೋಷಿಸಿದರು .
ಅನುಷ್ಕಾ ಚಕ್ಡಾ ಎಕ್ಸ್ಪ್ರೆಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಈ ಚಿತ್ರವು ಸುಮಾರು ನಾಲ್ಕು ವರ್ಷದ ನಂತರ ಚಿತ್ರೀಕರಣ ನಡೆಯುತ್ತಿದೆ. ಈ ನಟಿ ಇತ್ತೀಚೆಗೆ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.