

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯಪಾಲರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು, ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಪ್ರಕರಣ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸಿ.ವಿ.ಆನಂದ ಬೋಸ್ ಅವರ ವಿರುದ್ಧ ಆರೋಪ ಮಾಡಿರುವ ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯಪಾಲರನ್ನು ಮೇ 2ರಂದು ಹುದ್ದೆ ಬಡ್ತಿ ನೀಡುವ ಕುರಿತು ಭೇಟಿಯಾಗಿದ್ದೆ. ಆಗ ಅವರು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಮಹಿಳಾ ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ. ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಮೊದಲು ಮಹಿಳೆ ರಾಜಭವನ ಪೊಲೀಸರಿಗೆ ಈ ಕುರಿತಂತೆ ಮಾಹಿತಿ ಕೊಟ್ಟಿದ್ದರು. ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾವು ಕಾನೂನು ಇಲಾಖೆಯ ಸಾಂವಿಧಾನಿಕ ತಜ್ಞರೊಂದಿಗೆ ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ. ದೂರು ನೀಡಿರುವ ಮಹಿಳೆ ಪ್ರಕಾರ, ರಾಜಭವನದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ ಮಾಹಿತಿ ಕೊಟ್ಟಿದ್ದಾರೆ.
ರಾಜಭವನ ಹೇಳಿಕೆ: ಈ ಮಧ್ಯೆ ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ರಾಜಭವನ ಹೇಳಿಕೆ ನೀಡಿದ್ದು, ರಾಜ್ಯಪಾಲರ ವಿರುದ್ಧ ಮಾನಹಾನಿಕರ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಲು, ಹಣಕಾಸು ಇಲಾಖೆಯ ರಾಜ್ಯ ಸಚಿವ ಚಂದ್ರಿಮಾ ಭಟ್ಟಾಚಾರ್ಯ ಕುಮ್ಮಕ್ಕಿದ್ದು, ಅವರು ಕೋಲ್ಕತ್ತಾ, ಬ್ಯಾರಕ್ಪುರ ಮತ್ತು ಡಾರ್ಜಿಲಿಂಗ್ನಲ್ಲಿರುವ ರಾಜಭವನ ಸಂಕೀರ್ಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಚಿವರ ಸಮ್ಮುಖದಲ್ಲಿ ಯಾವುದೇ ಸಮಾರಂಭದಲ್ಲಿ ಭಾಗವಹಿಸದಂತೆ ರಾಜ್ಯಪಾಲರೂ ಸೂಚಿಸಿದ್ದಾರೆ. ಸಚಿವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಸಲಹೆಗಾಗಿ ಭಾರತದ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆರೋಪ ತಳ್ಳಿ ಹಾಕಿದ ಬೋಸ್: ರಾಜಭವನದ ಉದ್ಯೋಗಿ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ರಾಜ್ಯಪಾಲರು ನಿರಾಕರಿಸಿದ್ದಾರೆ. ನನ್ನನ್ನು ನಿಂದಿಸುವ ಮೂಲಕ ಯಾರಾದರೂ ಚುನಾವಣಾ ಲಾಭವನ್ನು ಬಯಸಿದರೆ, ದೇವರು ಅವರನ್ನು ಆಶೀರ್ವದಿಸಲಿ. ಆದರೆ, ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ನನ್ನ ಹೋರಾಟವನ್ನು ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ಸಿವಿ ಆನಂದ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ.