

ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭಾರತ ಅಭೂತಪೂರ್ವ ಗೆಲುವ ಸಾಧಿಸಿತ್ತು. ವಿರಾಟ್ ಕೊಹ್ಲಿ ತೋರಿದ ಜವಾಬ್ದಾರಿಯುತ ಇನ್ನಿಂಗ್ಸ್ ಕಾರಣದಿಂದ ಭಾರತ, ಪಾಕಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಲು ಕಾರಣವಾಗಿತ್ತು. ರೋಚಕ ರೀತಿಯ ಈ ಪಂದ್ಯ ನಡೆದು ತಿಂಗಳುಗಳೇ ಕಳೆದರೂ, ಕ್ರಿಕೆಟ್ ಪ್ರೇಮಿಗಳು ಮಾತ್ರ ಈ ಪಂದ್ಯದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಇಂದಿಗೂ ಕೂಡಾ ಪಾಕಿಸ್ತಾನ ವಿರುದ್ಧದ ಪಂದ್ಯ ಹಾಗೂ ಅದರಲ್ಲಿ ಕೊಹ್ಲಿಯ ಆಟದ ಬಗ್ಗೆ ಒಂದಲ್ಲಾ ಒಂದು ರೀತಿಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಗಳಿಸಲು ಸಾಧ್ಯವಾಗಿದ್ದು ವಿರಾಟ್ ಕೊಹ್ಲಿ ಬ್ಯಾಟಿಂಗ್ನಿಂದ. ಇದೀಗ ಕೊಹ್ಲಿ ಈ ಪಂದ್ಯದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಜತೆಗೆ '2022ರ ಅಕ್ಟೋಬರ್ 23 ನನ್ನ ಹೃದಯದಲ್ಲಿ ಯಾವತ್ತಿಗೂ ವಿಶೇಷವಾದ ದಿನ. ಮೈದಾನದಲ್ಲಿ ಈ ಹಿಂದೆ ಇಷ್ಟೊಂದು ಶಕ್ತಿಯನ್ನು ನಾನು ಅನುಭವಿಸಿರಲಿಲ್ಲ. ಅಂದಿನ ಸಂಜೆಯ ಕ್ರಿಕೆಟ್ ಪ್ರೇಮಿಗಳ ಆಶೀರ್ವಾದ ವ್ಯಾಖ್ಯಾನಕ್ಕೆ ನಿಲುಕದ್ದು' ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧ ರೋಚಕ ಪಂದ್ಯದಲ್ಲಿ ಕೊಹ್ಲಿಗೆ ಹಾರ್ದಿಕ್ ಪಾಂಡ್ಯಾ ಉತ್ತಮ ಸಾಥ್ ನೀಡಿದ್ದರು. ಭಾರತ ಆರಂಭದಲ್ಲಿಯೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿತ್ತು. ಈ ವೇಳೆ ಒಂದಾದ ಕೊಹ್ಲಿ ಹಾಗೂ ಪಾಂಡ್ಯಾ 113ರನ್ಗಳ ಜವಾಬ್ದಾರಿಯುತ ಜೊತೆಯಾಟದ ಮೂಲಕ ಜಯದ ಹಾದಿಯ ಸುಗಮಗೊಳಿಸುತ್ತಾ ಹೋದರು. ಕೊನೆಗೆ 19ನೇ ಓವರ್ನಲ್ಲಿ ಕೊಹ್ಲಿ ಅದ್ಭುತವಾದ ಎರಡು ಸಿಕ್ಸರ್ ಸಿಡಿಸುವ ಮೂಲಕ ಭಾರತದ ಜಯವನ್ನು ಇನ್ನಷ್ಟು ಹತ್ತಿರವಾಗಿಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 82 ರನ್ ಸಿಡಿಸಿ ಮಿಂಚಿದ್ದರು.