

ನವದೆಹಲಿ: ಸುದೀರ್ಘ 14 ತಿಂಗಳುಗಳ ಬಳಿಕ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಮರಳಿದ್ದಾರೆ. ನಿನ್ನೆ ಆಫ್ಘಾನ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 29 ರನ್ ಬಾರಿಸುವ ಮೂಲಕ ಟಿ20 ಮಾದರಿಯಲ್ಲಿ ಹಿಂದಿನ ಪಂದ್ಯಗಳಿಗಿಂತ ಹೊಸ ಸ್ಪರ್ಶದೊಂದಿಗೆ ಕೊಹ್ಲಿ ವಿಶೇಷ ಗಮನ ಸೆಳೆದರು.
29 ರನ್ಗಳಿಗೆ 5 ಬೌಂಡರಿ ಬಾರಿಸಿದ ಕೊಹ್ಲಿ, 2023ರ ಐಪಿಎಲ್ ಟೂರ್ನಿಯ ವೇಳೆ ತನ್ನ ಮೇಲೆ ಹರಿಹಾಯ್ದಿದ್ದ ಆಫ್ಘಾನ್ನ ವೇಗಿ ನವೀನ್ ಉಲ್ ಹಕ್ ಮೇಲೆ ಹೊಸ ರೀತಿಯ ಹೊಡೆತವನ್ನು ಪ್ರಯತ್ನಿಸಿದರು. ಈ ವಿನೂತನ ಹೊಡೆತವನ್ನು 2022 ಟಿ20 ವಿಶ್ವಕಪ್ ಸಮಯದಲ್ಲಿ ಕೊಹ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ ಮೇಲೆ ಪ್ರಯೋಗ ಮಾಡಿದ್ದರು. ಆ ವೇಳೆ ಕೊಹ್ಲಿ ಬ್ಯಾಟ್ನಿಂದ ಸಿಡಿದ ಚೆಂಡು ಆಕಾಶದ ಮೇಲೆ ಹಾರಿ ಬೌಂಡರಿ ಗೆರೆ ದಾಟಿತ್ತು. ನಿನ್ನೆ ನವೀನ್ ಮೇಲೆ ಇದೇ ಪ್ರಯೋಗ ಮಾಡಲಾಯಿತು ಆದರೆ, ಚೆಂಡು ಬೌಂಡರಿ ಗೆರೆಯ ಹಿಂದೆಯೇ ಬಿದ್ದು ಬೌಂಡರಿಯಾಯಿತು.
ಹ್ಯಾರಿಸ್ ರೌಫ್ ಶಾಟ್ ಅನ್ನು ಕೊಹ್ಲಿ ಮರುಸೃಷ್ಟಿಸಿದ್ದಾರೆ ಎಂದು ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ಆದರೆ, ಕೊಹ್ಲಿಗೆ ತನ್ನ ಹೊಸ ಹೊಡೆತ ಇಷ್ಟವಾಗದಂತೆ ತೋರುತ್ತದೆ. ಏಕೆಂದರೆ, ಆ ಚೆಂಡು ಬೌಂಡರಿ ಬದಲು ಸಿಕ್ಸರ್ ಆಗಬೇಕೆಂದು ಕೊಹ್ಲಿ ಬಯಸಿದ್ದರು. ಆದರೆ, ಕೊಹ್ಲಿಯ ಈ ಹೊಡೆತ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿದ್ದು, ಸಾಮಾಜಿಕ ತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಆರಂಭಿಕ ಯಶಸ್ವಿ ಜೈಸ್ವಾಲ್ (68 ರನ್, 34 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಶಿವಂ ದುಬೆ (63* ರನ್, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ಎದುರು 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ ಒಂದು ಪಂದ್ಯ ಬಾಕಿಯಿರುವಂತೆಯೇ ರೋಹಿತ್ ಶರ್ಮ ಪಡೆ 2-0 ವಶಪಡಿಸಿಕೊಂಡಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಆಫ್ಘನ್, ಗುಲ್ಬಾದಿನ್ ನೈಬ್ (57 ರನ್, 35 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನಡುವೆಯೂ ಭರ್ತಿ 20 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್- ಶಿವಂ ದುಬೆ ಜತೆಯಾಟದ ಬಲದಿಂದ ಭಾರತ 4.2 ಓವರ್ ಬಾಕಿ ಇರುವಂತೆಯೇ 4 ವಿಕೆಟ್ಗೆ 173 ರನ್ಗಳಿಸಿ ಚೆಂಡಾಡಿದರು. (ಏಜೆನ್ಸೀಸ್)