ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮೂರು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ; ಏನದು?

Virat Kohli
Published on

ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ಸೆಣಸಾಡುತ್ತಿದ್ದು, ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಪಾಲಿಗೆ ಈ ಪಂದ್ಯ ಮಹತ್ವವೆನ್ನಿಸಿದೆ. ಇತ್ತ ರಾಜಸ್ಥಾನ ತಂಡವು ಪ್ರಸ್ತುತ ಟೂರ್ನಿಯಲ್ಲಿ ಅಜೇಯವಾಗಿದ್ದು, ಇದುವರೆಗೆ ಆಡಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಗೆಲುವಿನ ಹಂಬಲದಲ್ಲಿರುವ ಆರ್​ಸಿಬಿ, ಸೋಲೇ ಕಾಣದ ರಾಜಸ್ಥಾನಕ್ಕೆ ಈ ಪಂದ್ಯ ಬಹಳ ಮುಖ್ಯವಾಗಿದೆ.

ಹಾಲಿ ಐಪಿಎಲ್​ ಋತುವಿನಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್​ ಕೊಹ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 67.67 ಸರಾಸರಿಯಲ್ಲಿ 203 ರನ್ ಬಾರಿಸುವ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಉತ್ತಮ ಲಯದಲ್ಲಿರುವ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲೂ ತಮ್ಮ ಫಾರ್ಮ್​​ ಮುಂದುವರೆಸಿದರೆ ಮೂರು ದಾಖಲೆಗಳು ತಮ್ಮದಾಗಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಇನ್ನೂ 34 ರನ್​ ಕಲೆಹಾಕಿದರೆ, ಐಪಿಎಲ್​ನಲ್ಲಿ 7500 ರನ್ ಪೂರೈಸಲಿದ್ದಾರೆ. ಇದುವರೆಗೆ ಕೊಹ್ಲಿ ಐಪಿಎಲ್‌ನಲ್ಲಿ ಆಡಿರುವ 241 ಪಂದ್ಯಗಳಲ್ಲಿ 7466 ರನ್ ಬಾರಿಸಿದ್ದು, ಐಪಿಎಲ್​ನಲ್ಲಿ ಅಧಿಕ ರನ್ ಬಾರಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ ಪಾತ್ರರಾಗಲಿದ್ದಾರೆ.

Virat Kohli

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 62 ರನ್​ ಗಳಿಸಿದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಅತ್ಯಧಿಕ ರನ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಕೊಹ್ಲಿ ರಾಜಸ್ಥಾನ್ ವಿರುದ್ಧ ಇದುವರೆಗೆ 29 ಪಂದ್ಯಗಳಲ್ಲಿ 618 ರನ್ ಬಾರಿಸಿದ್ದಾರೆ. ಪ್ರಸ್ತುತ, ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್‌ನಲ್ಲಿ 679 ರನ್ ಬಾರಿಸಿರುವ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ 5ನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ಮೊದಲು ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್, ಸುರೇಶ್ ರೈನಾ ಮತ್ತು ದಿನೇಶ್ ಕಾರ್ತಿಕ್ ಇದ್ದಾರೆ.

ಐಪಿಎಲ್ ಆರಂಭವಾದಾಗಿನಿಂದಲೂ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ ಇಂದಿನ ಪಂದ್ಯದಲ್ಲಿ 110 ರನ್ ಸಿಡಿಸಲು ಸಾಧ್ಯವಾದರೆ ಟಿ20 ಕ್ರಿಕೆಟ್​ನಲ್ಲಿ ಒಂದೇ ತಂಡದ ಪರ 8000 ಕ್ಕೂ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ಪರ 241 ಪಂದ್ಯ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಆರ್​ಸಿಬಿ ಪರ 256 ಪಂದ್ಯಗಳನ್ನಾಡಿರುವ ವಿರಾಟ್, 37.75 ಸರಾಸರಿಯಲ್ಲಿ 7890 ರನ್ ಬಾರಿಸಿದ್ದಾರೆ. ಇದೀಗ ಈ ತಂಡದ ಪರ 8000 ರನ್‌ಗಳ ಗಡಿಯನ್ನು ಮುಟ್ಟಲು ಕೊಹ್ಲಿಗೆ ಇನ್ನೂ 110 ರನ್‌ಗಳ ಅಗತ್ಯವಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದ್ದಾರ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net