ಈ ಐತಿಹಾಸಿಕ ದಾಖಲೆ ಬರೆಯಲು 'ಕಿಂಗ್​ ಕೊಹ್ಲಿ'ಗೆ ಬೇಕಿದೆ 3 ಶತಕ! ವಿರಾಟ್​ ಮೇಲೆ ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ | Record

virat kohli
Published on

ನವದೆಹಲಿ: ಪ್ರಸ್ತುತ ಆಸ್ಟ್ರೇಲಿಯಾದ ಪರ್ತ್​ನಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಟೆಸ್ಟ್​ ಮ್ಯಾಚ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಅಬ್ಬರಿಸಿದ ವಿರಾಟ್​ ಕೊಹ್ಲಿ, ಶತಕ ಬಾರಿಸಿ, ತಂಡದ ರನ್​ಗಳ ಸಂಖ್ಯೆಯನ್ನು ಹೆಚ್ಚಿಸಿದರು. ಇದು ಕಾಂಗೂರು ಪಡೆ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 143 ಎಸೆತಗಳಲ್ಲಿ ಶತಕ ಬಾರಿಸಿದ ವಿರಾಟ್​, ಇದೀಗ ಐತಿಹಾಸಿಕ ದಾಖಲೆ (Record) ಬರೆಯಲು ಎದುರುನೋಡುತ್ತಿದ್ದಾರೆ.

ಮೂರೇ ಮೂರು ಸೆಂಚುರಿ

ಟೆಸ್ಟ್​ ಪಂದ್ಯಗಳಲ್ಲಿ ಇದು ವಿರಾಟ್​ ಕೊಹ್ಲಿ ಅವರ 30ನೇ ಶತಕವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 81 ಸೆಂಚುರಿ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹತ್ತು ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಬ್ಯಾಟರ್ ಆಗಲು ಕೊಹ್ಲಿಗೆ ಬೇಕಿರುವುದು ಕೇವಲ ಮೂರೇ ಮೂರು ಸೆಂಚುರಿ ಮಾತ್ರ. ಇನ್ನು ಉಳಿದಿರುವ ನಾಲ್ಕು ಟೆಸ್ಟ್ ​ಮ್ಯಾಚ್​ಗಳಲ್ಲಿ ವಿರಾಟ್​ ಏನಾದರೂ ಮೂರು ಶತಕ ಗಳಿಸುವಲ್ಲಿ ಸಫಲರಾದರೆ, ಈ ಐತಿಹಾಸಿಕ ದಾಖಲೆ ಬರೆಯುವ ಮೊದಲ ಆಟಗಾರ ಹಾಗೂ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಪ್ರಸ್ತುತ ಇಂಗ್ಲೆಂಡ್ ದಿಗ್ಗಜ ಜ್ಯಾಕ್ ಹಾಬ್ಸ್ ಆಸ್ಟ್ರೇಲಿಯಾ ನೆಲದಲ್ಲಿ 9 ಶತಕಗಳನ್ನು ಬಾರಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅಸಲಿಗೆ ಜ್ಯಾಕ್​ ಜತೆಗೆ ಇನ್ಯಾವ ದೇಶದ ಆಟಗಾರರು ಈ ಸಾಲಿನಲ್ಲಿದ್ದಾರೆ ಎಂಬುದರ ವಿವರ ಹೀಗಿದೆ.

ಇಲ್ಲಿದೆ ನೋಡಿ ಪಟ್ಟಿ

ಜ್ಯಾಕ್ ಹಾಬ್ಸ್ (ಇಂಗ್ಲೆಂಡ್)- 9

ವಾಲಿ ಹ್ಯಾಮಂಡ್ (ಇಂಗ್ಲೆಂಡ್)- 7

ವಿರಾಟ್ ಕೊಹ್ಲಿ (ಭಾರತ) - 7

ಸಚಿನ್ ತೆಂಡೂಲ್ಕರ್ (ಭಾರತ)-6

ಹರ್ಬರ್ಟ್ ಸಟ್‌ಕ್ಲಿಫ್ (ಇಂಗ್ಲೆಂಡ್)- 6

ಅಡಿಲೇಡ್‌ ಓವಲ್​ ಕ್ರೀಡಾಂಗಣ

ಇನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯ ನಡೆಯುವ ಅಡಿಲೇಡ್ ಓವಲ್‌ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವೆಸ್ಟ್​ ಇಂಡೀಸ್​ನ ದಂತಕಥೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೇವಲ 102 ರನ್‌ಗಳ ಹಿಂದಿದ್ದಾರೆ. ಅಡಿಲೇಡ್‌ನಲ್ಲಿ ಲಾರಾ 610 ರನ್ ಗಳಿಸಿ, ಮೊದಲ ಆಟಗಾರನ ಸ್ಥಾನದಲ್ಲಿದ್ದಾರೆ. ಈ ದಾಖಲೆ ಮುರಿಯಲು ವಿರಾಟ್​ಗೆ​ ಬೇಕಿರುವುದು ಕೇವಲ 103 ರನ್​ಗಳು ಮಾತ್ರ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net