

ತಿರುವನಂತಪುರ: ಅನುಭವಿ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್ನಲ್ಲಿ ಕ್ರಮವಾಗಿ 15 ಸಾವಿರ ಮತ್ತು 12 ಸಾವಿರ ರನ್ ಪೂರೈಸುವ ಅವಕಾಶ ಹೊಂದಿದ್ದಾರೆ.
37 ವರ್ಷದ ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 314 ಏಕದಿನ ಪಂದ್ಯಗಳಲ್ಲಿ 14,941 ರನ್ ಗಳಿಸಿದ್ದು, ಇನ್ನು 59 ರನ್ ಗಳಿಸಿದರೆ ದಿಗ್ಗಜ ಸಚಿನ್ ತೆಂಡುಲ್ಕರ್ (18,426) ಬಳಿಕ ಏಕದಿನ ಕ್ರಿಕೆಟ್ನಲ್ಲಿ 15 ಸಾವಿರ ರನ್ ಪೂರೈಸಿದ 2ನೇ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ 387 ಪಂದ್ಯ, 377 ಇನಿಂಗ್ಸ್ಗಳಲ್ಲಿ 15 ಸಾವಿರ ರನ್ ಪೂರೈಸಿದ್ದರೆ, ಕೊಹ್ಲಿ ಅದಕ್ಕಿಂತ ಸುಮಾರು 62 ಪಂದ್ಯ ಮತ್ತು 75 ಇನಿಂಗ್ಸ್ ಬೇಗನೆ ಈ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.
39 ವರ್ಷದ ರೋಹಿತ್ ಶರ್ಮ ಇದುವರೆಗೆ ಆಡಿರುವ 288 ಪಂದ್ಯಗಳಲ್ಲಿ 11,895 ರನ್ ಗಳಿಸಿದ್ದು, ಇನ್ನು 105 ರನ್ ಗಳಿಸಿದರೆ 12 ಸಾವಿರ ರನ್ ಪೂರೈಸಿದ 3ನೇ ಭಾರತೀಯ ಮತ್ತು ವಿಶ್ವದ 7ನೇ ಬ್ಯಾಟರ್ ಎನಿಸಲಿದ್ದಾರೆ.
ಮುತ್ತೂಟ್ ಶೀರ್ಷಿಕೆ ಪ್ರಾಯೋಜಕತ್ವ
ನಾನ್-ಬ್ಯಾಂಕಿಂಗ್ ಹಣಕಾಸು ಕಂಪನಿಯಾದ ಮುತ್ತೂಟ್ ಫಿನ್ಕಾರ್ಪ್, ಭಾರತ ತಂಡದ ತವರಿನ ಕ್ರಿಕೆಟ್ ಸರಣಿಗಳಿಗೆ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ 2028ರ ಮಾರ್ಚ್ 31ರವರೆಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿದ್ದು, ಶನಿವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ಪ್ರತಿ ಪಂದ್ಯಕ್ಕೆ 4.3 ಕೋಟಿ ರೂ.ನಂತೆ ಒಟ್ಟು 150 ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ ಎನ್ನಲಾಗಿದೆ. ಮುಂದಿನ 2 ವರ್ಷ ಭಾರತ ತವರಿನಲ್ಲಿ ಆಡಲಿರುವ ಒಟ್ಟು 35 ಪಂದ್ಯಗಳ (10 ಟೆಸ್ಟ್, 12 ಏಕದಿನ, 13 ಟಿ20) ಜತೆಗೆ ದೇಶೀಯ ಕ್ರಿಕೆಟ್ ಪಂದ್ಯಗಳೂ ಈ ಒಪ್ಪಂದಕ್ಕೆ ಒಳಪಟ್ಟಿವೆ.