ಚೆನ್ನಾಗಿ ಆಡಿದರೂ ಕೊಹ್ಲಿಯನ್ನು ಟಾರ್ಗೆಟ್​ ಮಾಡಲಾಗುತ್ತಿದೆ! ಪಾಕ್​ ಲೆಜೆಂಡರಿ ಕ್ರಿಕೆಟಿಗನ ಆಕ್ರೋಶ

Virat Kohli 1
Published on

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ಧೂಳೆಬ್ಬಿಸುತ್ತಿದ್ದಾರೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 67ರ ಸರಾಸರಿಯಲ್ಲಿ ಒಟ್ಟು 542 ರನ್ ಗಳಿಸಿದ್ದಾರೆ. ತಮ್ಮ ಅಮೋಘ ಆಟದೊಂದಿಗೆ ಆರ್‌ಸಿಬಿ ಗೆಲುವಿಗೆ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಜೂನ್​ 1ರಿಂದ ಆರಂಭವಾಗುವ ಟಿ20 ವಿಶ್ವಕಪ್​ಗೂ ಮುನ್ನ ಕೊಹ್ಲಿ ಸಂಪೂರ್ಣ ಫಾರ್ಮ್‌ಗೆ ಮರಳಿರುವುದು ಟೀಂ ಇಂಡಿಯಾಗೆ ಭರ್ಜರಿ ಸುದ್ದಿ ಎಂದೇ ಹೇಳಬೇಕು. ವಿಶ್ವಕಪ್​ನಲ್ಲೂ ವಿರಾಟ್ ಹೀಗೆ ಆಡಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಐಪಿಎಲ್‌ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ವಿಚಾರ ವಿವಾದಕ್ಕೀಡಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅವರ ಸ್ಟ್ರೈಕ್ ರೇಟ್ 118 ಆಗಿದ್ದರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.

ಆರಂಭಿಕರಾಗಿ ಕಣಕ್ಕಿಳಿಯುವ ಕೊಹ್ಲಿ ಬಹುತೇಕ ಪಂದ್ಯಗಳಲ್ಲಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿದ್ದಾರೆ. ಆದರೂ ಕೊಹ್ಲಿಯ ಸ್ಟ್ರೈಕ್ ರೇಟ್ ಮಾತ್ರ 118 ಆಗಿರುವುದರಿಂದ ಭಾರತದ ಕ್ರಿಕೆಟ್​ ದಂತಕಥೆ ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಹಿರಿಯರು ಕೊಹ್ಲಿಯನ್ನು ಟೀಕಿಸಿದ್ದಾರೆ. ಇಷ್ಟು ನಿಧಾನವಾಗಿ ಆಡುವುದು ಸರಿಯಲ್ಲ ಎನ್ನುತ್ತಿದ್ದಾರೆ. ಅಲ್ಲದೆ, ವಿರಾಟ್ ಸ್ಪಿನ್ನರ್​ಗಳನ್ನು ಸರಿಯಾಗಿ ಎದುರಿಸುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್​ನಲ್ಲಿಯೂ ಇದೇ ರೀತಿ ಆಡಿದರೆ ಭಾರತ ಕಪ್ ಗೆದ್ದಂತೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕ್ರಿಕೆಟ್​ ದಂತಕಥೆ ವಾಸಿಂ ಅಕ್ರಮ್ ಅವರು ಪ್ರತಿಕ್ರಿಯಿಸಿದ್ದು, ಕೊಹ್ಲಿ ಪರ ಬ್ಯಾಟ್​ ಬೀಸಿದ್ದಾರೆ. ಕೊಹ್ಲಿಯನ್ನು ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ. ಇಷ್ಟೊಂದು ಚೆನ್ನಾಗಿ ಆಡುತ್ತಿದ್ದರೂ ಕೊಹ್ಲಿಯನ್ನು ಗುರಿಯಾಗಿಸಿಕೊಂಡು ನೇರ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಶತಕ ಸಿಡಿಸಿದ ಪಂದ್ಯದಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ 150 ಆಗಿತ್ತು. ಇದು ಸಾಕಾಗುವುದಿಲ್ಲವೇ? ಇನ್ನೂ ವೇಗವಾಗಿ ಆಡಲು ಬಯಸುವಿರಾ? ವಿರಾಟ್ ಈ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಿರುವಾಗ ಮತ್ತು ಅವರ ತಂಡ ಗೆಲ್ಲುತ್ತಿರುವಾಗ ಟೀಕೆಗಳು ಮಾಡುತ್ತಿರುವುದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕೊಹ್ಲಿ ಮೇಲೆ ಕೆಸರು ಎರಚುವವರೆಲ್ಲ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಕ್ರಿಕೆಟ್ 11 ಆಟಗಾರರ ತಂಡದ ಆಟವಾಗಿದೆ. ಇಲ್ಲಿ ಒಬ್ಬ ಆಟಗಾರ ಚೆನ್ನಾಗಿ ಆಡಿದರೆ ಸಾಕಾಗುವುದಿಲ್ಲ. ಒಬ್ಬರೇ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ನಾಯಕನಾಗಿದ್ದಾಗಲೂ ವಿರಾಟ್ ಒತ್ತಡದಲ್ಲಿ ಇರುತ್ತಿದ್ದರು. ಈಗಲೂ ಅವರ ಮೇಲಿನ ಒತ್ತಡ ಅದೇ ಮಟ್ಟದಲ್ಲಿದೆ. ಆದರೂ ಅವರು ಚೆನ್ನಾಗಿ ಆಡುತ್ತಿದ್ದಾರೆ. ಅನಾವಶ್ಯಕವಾಗಿ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ ಎಂದು ವಾಸಿಂ ಅಕ್ರಮ್​ ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net