ನ್ಯೂಜಿಲೆಂಡ್​ ವಿರುದ್ಧ ವಿಶೇಷ ದಾಖಲೆ ಬರೆಯಲು ಕಿಂಗ್​ ಕೊಹ್ಲಿಗೆ ಬೇಕಿದೆ ಕೇವಲ 85 ರನ್! Virat Kohli

Virat Kohli
Published on

Virat Kohli : ಟೀಮ್​ ಇಂಡಿಯಾದ ರನ್​ ಮೆಷಿನ್​, ದಾಖಲೆಗಳ ಸರದಾರ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ.

36 ವರ್ಷದ ಕೊಹ್ಲಿಗೆ ನ್ಯೂಜಿಲೆಂಡ್​ ವಿರುದ್ಧ 3000 ಅಂತಾರಾಷ್ಟ್ರೀಯ ರನ್ ಗಳಿಸಿದ ಐದನೇ ಬ್ಯಾಟ್ಸ್‌ಮನ್ ಆಗಲು ಕೇವಲ 85 ರನ್‌ಗಳು ಬೇಕಾಗಿವೆ. ಈ ಸಾಧನೆ ಮಾಡಿದ ಇತರ ಬ್ಯಾಟ್ಸ್‌ಮನ್‌ಗಳೆಂದರೆ ಸಚಿನ್ ತೆಂಡೂಲ್ಕರ್ (3345), ರಿಕಿ ಪಾಂಟಿಂಗ್ (3145), ಜಾಕಸ್​ ಕಾಲಿಸ್ (3071) ಮತ್ತು ಜೋ ರೂಟ್ (3068).

ಕೊಹ್ಲಿ ಅವರು ನ್ಯೂಜಿಲೆಂಡ್​ ವಿರುದ್ಧ 55 ಏಕದಿನ ಪಂದ್ಯಗಳಲ್ಲಿ 47.01 ಸರಾಸರಿಯಲ್ಲಿ 2915 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಮತ್ತು 15 ಅರ್ಧಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ 117 ರನ್ ಗಳಿಸಿದ್ದರು.

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಲು ಕೊಹ್ಲಿ 105 ರನ್‌ಗಳ ದೂರದಲ್ಲಿದ್ದಾರೆ. ಪ್ರಸ್ತುತ, ಸಚಿನ್ ತೆಂಡೂಲ್ಕರ್ 1750 ರನ್‌ಗಳೊಂದಿಗೆ ಈ ದಾಖಲೆಯನ್ನು ಹೊಂದಿದ್ದಾರೆ. ರಿಕಿ ಪಾಂಟಿಂಗ್ 1971 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಮಾರ್ಚ್ 2ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್​ ಟ್ರೋಫಿಯ ಕೊನೆಯ ಲೀಗ್​ ಪಂದ್ಯ ನಡೆಯಲಿದ್ದು, ಇದರಲ್ಲಿ ಕೊಹ್ಲಿ ಈ ಹೊಸ ಮೈಲಿಗಲ್ಲು ತಲುಪುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಕೊಹ್ಲಿ ಫಾರ್ಮ್​ ಕೊರತೆ ಎದುರಿಸುತ್ತಿದ್ದರು. ಆದರೆ, ಅಹಮದಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದರು. ಅಲ್ಲದೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 100 ರನ್ ಗಳಿಸುವ ಮೂಲಕ ಮತ್ತೆ ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net