

Karnataka bandh : ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು (ಫೆ.28) ಘೋಷಿಸಿದರು.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ಮುಂದಾಗಿವೆ. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಮಾರ್ಚ್ 3ರಿಂದ 22ರವರೆಗೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಲಿದ್ದು, ಮಾರ್ಚ್ 22ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ, ಮರಾಠಿ ಪುಂಡರು ಕರ್ನಾಟಕದ ಬಸ್ಗಳಿಗೆ ಹಾಗೂ ಕಂಡಕ್ಟರ್ ಮತ್ತು ಡ್ರೈವರ್ಗಳಿಗೆ ಮಸಿ ಬಳಿಯುತ್ತಿದ್ದು, ಪುಂಡರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಮತ್ತು ಇನ್ನು ಮುಂದೆ ಇಂತಹ ಘಟನೆಗಳು ಮರುಕುಳಿಸದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಏರಲು ಮಾರ್ಚ್.22ಕ್ಕೆ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
ಬಂದ್ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಹೋಟೆಲ್, ಚಿತ್ರಮಂದಿರ, ಶಾಲಾ-ಕಾಲೇಜುಗಳು ಎಲ್ಲವು ಬಂದ್ ಮಾಡಬೇಕು. ಸಾರಿಗೆ ಸಂಚಾರವೂ ಕೂಡ ಇರಬಾರದು. ನಮ್ಮ ಬಂದ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿರ ರಾಮಲಿಂಗಾರೆಡ್ಡಿ ಕೂಡ ಸಹಕಾರ ನೀಡಬೇಕು. ನಮ್ಮ ಬೇಡಿಕೆಗಳು ಈಡೇರಿದರೆ ಮಾತ್ರ ಬಂದ್ ವಾಪಸ್ ಪಡೆಯುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮಾ.3 ರಂದು ಬೆಳಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ ಹಾಕಲಿದ್ದೇವೆ. ಮಾ.7ಕ್ಕೆ ಬೆಳಗಾವಿ ಚಲೋ ಕೈಗೊಳ್ಳುತ್ತೇವೆ. ಮಾ.11 ರಂದು ಮೇಕೆದಾಟು ಯೋಜನೆಗೆ ಆಗ್ರಹಿಸಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಮಾ.14 ರಂದು ಮೈಸೂರು, ಮಂಡ್ಯ, ರಾಮನಗರ ಡಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ತಿಳಿಸಿದರು.