ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ 'ಕಿಂಗ್'​ ಸಜ್ಜು! ಕಾಂಗರೂ ನಾಡಿನಲ್ಲಿ 54 ರನ್​ ಸಿಡಿಸಿದ್ರೆ ಕೊಹ್ಲಿ ಹೊಸ ದಾಖಲೆ... | Virat Kohli

ವಿಜಯವಾಣಿ (40)
Published on

Virat Kohli: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಮತ್ತು ಮೂರು ಏಕದಿನ ಸರಣಿಗೆ ಭಾರತ ತಂಡ ಸನ್ನದ್ಧವಾಗಿದೆ. ಈಗಾಗಲೇ ಎರಡು ಸರಣಿಗೂ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಏಕದಿನ ಫಾರ್ಮೆಟ್​ಗೆ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮರನ್ನು ವಾಪಾಸ್​ ಕರೆತಂದಿದೆ. ಇದು ಕ್ರಿಕೆಟ್​ ಪ್ರಿಯರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

ಟೆಸ್ಟ್ ಮತ್ತು ಟಿ20 ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ಟೀಮ್ ಇಂಡಿಯಾದ ದೂರ ಉಳಿದಿದ್ದ ಕೊಹ್ಲಿ ಮತ್ತು ರೋಹಿತ್​, ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ ದಿಗ್ಗಜ ಬ್ಯಾಟರ್​ಗಳು, ಈಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕೊಹ್ಲಿ ಪ್ರದರ್ಶನದ ಮೇಲೆ ಬಿಸಿಸಿಐ ಕಣ್ಣು

ಈ ಸರಣಿಯಲ್ಲಿ ಕೊಹ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ. ಕಾರಣ, 2027ರ ಏಕದಿನ ವಿಶ್ವಕಪ್​ ಟೂರ್ನಿಗೆ ಅವಕಾಶ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಸರಿಯಾಗಿ ನಿರ್ಣಯಿಸಲು. ಸದ್ಯ ವಿರಾಟ್​ ಅಖಾಡಕ್ಕಿಳಿಯುವುದನ್ನು ತೀರ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು, ಕೊಹ್ಲಿ ಮತ್ತು ಅವರ ಬ್ಯಾಟಿಂಗ್ ವೈಖರಿಯನ್ನು ಕಣ್ತುಂಬಿಕೊಳ್ಳಲು ಎದುರುನೋಡುತ್ತಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಏನಾದರೂ 54 ರನ್ ಗಳಿಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.

ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ. ಸಂಗಕ್ಕಾರ 404 ಏಕದಿನ ಪಂದ್ಯಗಳಲ್ಲಿ 380 ಇನ್ನಿಂಗ್ಸ್‌ಗಳಲ್ಲಿ 41.98 ಸರಾಸರಿಯಲ್ಲಿ 14,234 ರನ್ ಗಳಿಸಿದ್ದಾರೆ. ಇನ್ನು ಕೊಹ್ಲಿ ಇದುವರೆಗೆ 302 ಏಕದಿನ ಪಂದ್ಯಗಳನ್ನಾಡಿದ್ದು, ಅದರಲ್ಲಿ 290 ಇನ್ನಿಂಗ್ಸ್‌ಗಳಲ್ಲಿ 57.88 ಸರಾಸರಿಯಲ್ಲಿ 14,181 ರನ್ ದಾಖಲಿಸಿದ್ದಾರೆ. ಈ ಸರಣಿಯಲ್ಲಿ 54 ರನ್​ ಬಾರಿಸಿದರೆ, ಸಂಗಕ್ಕಾರ ಅವರ ದಾಖಲೆಯನ್ನು ಮುರಿದು, ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಈ ಪಟ್ಟಿಯಲ್ಲಿ 'ಕ್ರಿಕೆಟ್ ದೇವರು' ಎಂದೇ ಕರೆಯುಲ್ಪಡುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 463 ಪಂದ್ಯಗಳನ್ನಾಡಿರುವ ಸಚಿನ್​, 452 ಇನ್ನಿಂಗ್ಸ್‌ಗಳಲ್ಲಿ 44.83 ಸರಾಸರಿಯಲ್ಲಿ ಒಟ್ಟು 18,426 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಹೊಂದಿರುವ ಕೊಹ್ಲಿ, ಇಲ್ಲಿಯವರೆಗೆ ಒಟ್ಟು 51 ಶತಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರಿವರು

1. ಸಚಿನ್ ತೆಂಡೂಲ್ಕರ್ (ಭಾರತ) - 463 ಪಂದ್ಯ, 18,426 ರನ್

2. ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 404 ಪಂದ್ಯ, 14,234 ರನ್

3. ವಿರಾಟ್ ಕೊಹ್ಲಿ (ಭಾರತ) - 302 ಪಂದ್ಯ, 14,181 ರನ್​

4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 375 ಪಂದ್ಯ, 13,704 ರನ್​

5. ಸನತ್ ಜಯಸೂರ್ಯ (ಶ್ರೀಲಂಕಾ) - 445 ಪಂದ್ಯ, 13,430 ರನ್

ಏಕದಿನ ಸರಣಿಯ ವೇಳಾಪಟ್ಟಿ

1. ಮೊದಲ ಪಂದ್ಯ: ಅ.19 (ಪರ್ತ್ ಕ್ರೀಡಾಂಗಣ)

2. ಎರಡನೇ ಪಂದ್ಯ: ಅ. 23 (ಅಡಿಲೇಡ್ ಕ್ರೀಡಾಂಗಣ)

3. ಮೂರನೇ ಪಂದ್ಯ: ಅ.25 (ಸಿಡ್ನಿ ಕ್ರೀಡಾಂಗಣ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net