

ಮುಂಬೈ: ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಮೆಂಟ್ನ್ನು ಮುಂದೂಡಲಾಗಿದೆ. ಎಲ್ಲ ತಂಡದ ಆಟಗಾರರು ಅವರವರ ಕೆಲಸಕ್ಕೆ ವಾಪಾಸಾಗಿದ್ದಾರೆ. ಇದೀಗ ಆರ್ಸಿಬಿ ತಂಡದ ನಾಯಕ ಕೊಹ್ಲಿ ಕೂಡ ಮುಂಬೈಗೆ ವಾಪಾಸಾಗಿದ್ದು, ಕರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಕರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕುರಿತಾಗಿ ಯುವ ಸೇನೆ ಸಂಘಟನೆಯ ಸದ್ಯ ರಾಹುಲ್ ಎನ್ ಕನಾಲ್ ಅವರು ಗುರುವಾರದಂದು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ಯಾವ ರೀತಿಯಲ್ಲಿ ಜನರಿಗೆ ನೆರವಾಗಬಹುದು ಎನ್ನುವುದನ್ನು ಕೊಹ್ಲಿಯೊಂದಿಗೆ ಚರ್ಚಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಕರೊನಾ ಸೋಂಕಿತರಿಗೆ ಆಕ್ಸಿಜನ್ ಸೇರಿ ಕೆಲ ನೆರವನ್ನು ನೀಡುವುದಾಗಿ ಆರ್ಸಿಬಿ ಫ್ರಾಂಚೈಸಿ ಕೂಡ ಹೇಳಿಕೊಂಡಿದೆ. ಕೇವಲ ಕ್ರಿಕೆಟ್ ಆಟಗಾರರು ಮಾತ್ರವಲ್ಲದೆ, ಸಿನಿಮಾ ತಾರೆಯರೂ ಈ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಮುಂದಾಗಿದ್ದಾರೆ. (ಏಜೆನ್ಸೀಸ್)