ಮಗನೇ ಅಲ್ಲಿ ನೋಡು... ತಂದೆಯೊಬ್ಬ ತನ್ನ ಪುತ್ರನಿಗೆ ಕೊಹ್ಲಿ ಪರಿಚಯ ಮಾಡಿಕೊಟ್ಟ ವಿಡಿಯೋ ವೈರಲ್​! Virat Kohli

Virat Kohli
Published on

Virat Kohli : ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ಮುರಿದು ಕಿಂಗ್​ ಕೊಹ್ಲಿ ಎನಿಸಿಕೊಂಡಿದ್ದಾರೆ. ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಮೈದಾನಕ್ಕೆ ಕಾಲಿಟ್ಟ ತಕ್ಷಣ ರನ್‌ಗಳ ಮಹಾಪೂರವನ್ನೇ ಹರಿಸುತ್ತಾರೆ. ಕೊಹ್ಲಿಯ ಆಟಕ್ಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಭಾರತ ತಂಡ ವಿದೇಶದಲ್ಲಿ ಆಡುವಾಗ ಕೊಹ್ಲಿ ನೋಡಲೆಂದೇ ಸಾಕಷ್ಟು ಮಂದಿ ಬರುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ.

ಸದ್ಯ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡುತ್ತಿದ್ದಾರೆ. ಮೂರು ಟೆಸ್ಟ್‌ಗಳಲ್ಲಿ ಕೇವಲ 126 ರನ್ ಗಳಿಸಿದ್ದಾರೆ. ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಆ ಬಳಿಕ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಿಲ್ಲ.

ಡಿಸೆಂಬರ್ 26 ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಭರವಸೆಯನ್ನು ಕೊಹ್ಲಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೆಲ್ಬೋರ್ನ್ ಮೈದಾನದಲ್ಲಿ ನೆಟ್ಸ್‌ನಲ್ಲಿ ತೀವ್ರ ಅಭ್ಯಾಸ ನಡೆಸುತ್ತಿದ್ದಾರೆ.

ಕೊಹ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ವ್ಯಕ್ತಿಯೊಬ್ಬ ತನ್ನ ಮಗನಿಗೆ ವಿರಾಟ್ ಕೊಹ್ಲಿಯನ್ನು ಪರಿಚಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲಿ ನೋಡು.. ಅವರೇ ವಿರಾಟ್ ಕೊಹ್ಲಿ.. ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ತನ್ನ ಮಗನಿಗೆ ತಂದೆ ಹೇಳುತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, ಕೊಹ್ಲಿಯ ಖ್ಯಾತಿಯನ್ನು ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಟೆಸ್ಟ್​ ವಿಚಾರಕ್ಕೆ ಬರುವುದಾದರೆ, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮೂರು ಪಂದ್ಯಗಳ ನಂತರ 1-1 ಸಮಬಲದಲ್ಲಿವೆ. ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸೀಸ್ ಗೆದ್ದಿತ್ತು. ಮೂರನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಎಲ್ಲರ ಕಣ್ಣು ಬಾಕ್ಸಿಂಗ್ ಡೇ ಟೆಸ್ಟ್ ಮೇಲೆ ನೆಟ್ಟಿದೆ. ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net