

Virat Kohli: 12 ವರ್ಷಗಳ ಬಳಿಕ ಮತ್ತೆ ರಣಜಿ ಟ್ರೋಫಿ ಟೂರ್ನಿಗೆ ಮರಳಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಇಂದು ನಡೆಯಲಿರುವ ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಪಂದ್ಯಕ್ಕೆ ಸನ್ನದ್ಧರಾಗಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸೋತ ಬಳಿಕ, ತಮ್ಮ ಕಳಪೆ ಪ್ರದರ್ಶನದಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವಿರಾಟ್, ಸದ್ಯ ತಮ್ಮ ಕ್ರಿಕೆಟ್ ಬದುಕಿಗೆ ಆಸರೆಯಾದ ರಣಜಿಗೆ ಮರಳಿ, ಯುವ ಕ್ರಿಕೆಟಿಗರೊಡನೆ ಟೂರ್ನಿ ಆಡಲು ಸಜ್ಜಾಗಿದ್ದಾರೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮಾತನಾಡಿ, ಕೊಹ್ಲಿ ನ್ಯೂನ್ಯತೆಯನ್ನು ಎತ್ತಿಹಿಡಿದಿದ್ದಾರೆ.
ಆಸಿಸ್ ವಿರುದ್ಧ ಹೆಚ್ಚು ಬಾರಿ ಆಫ್ ಸ್ಟಂಪ್ಗೆ ವಿಕೆಟ್ ಕಳೆದುಕೊಂಡ ವಿರಾಟ್, ಮಾಜಿ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದರು. ಸದ್ಯ ಅದೇ ವಿಷಯವನ್ನು ಮುನ್ನೆಲೆಗೆ ತಂದ ಕೈಫ್, "ನನಗೆ ಚೆನ್ನಾಗಿ ನೆನಪಿದೆ. ಕೊಹ್ಲಿ ಅವರ ಹಿಂದಿನ ರಣಜಿ ಟ್ರೋಫಿ ಪಂದ್ಯ ನವೆಂಬರ್ 2012ರಲ್ಲಿ ನಡೆದಿತ್ತು. ಅಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ 14 ಮತ್ತು 43 ರನ್ ಗಳಿಸುವ ಮೊದಲು ವೇಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ಗೆ ಔಟ್ ಆಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ, ಸ್ಲಿಪ್ ಕಾರ್ಡನ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅವರ ಆಫ್-ಸ್ಟಂಪ್ ಸಮಸ್ಯೆ ಹೊಸದೇನಲ್ಲ" ಎಂದರು.
“2012ರಲ್ಲಿ ದೆಹಲಿ ವಿರುದ್ಧದ ನಮ್ಮ ಪಂದ್ಯವಿತ್ತು. ಆಗ ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದರು. ಆಗಲೇ ಅವರು ಈ ಆಫ್-ಸ್ಟಂಪ್ ಸಮಸ್ಯೆಯನ್ನು ಹೊಂದಿದ್ದರು. ಅದೇ ದೌರ್ಬಲ್ಯ ಈಗಲೂ ಅವರಲ್ಲಿದೆ ಹಾಗೂ ಇದು ಅವರಿಂದ ಇನ್ನೂ ಹೋಗಿಲ್ಲ ಎಂಬ ಸಂಗತಿ ನಿಜಕ್ಕೂ ನನ್ನಿಂದ ನಂಬಲು ಸಾಧ್ಯವಾಗ್ತಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಅವರು ಔಟ್ ಆದ ರೀತಿಯಲ್ಲೇ ನಮ್ಮ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿಯೂ ಕೊಹ್ಲಿ ಔಟ್ ಆಗಿದ್ದರು. ಈ ನ್ಯೂನ್ಯತೆ ಅವರನ್ನು ಕಾಡುತ್ತಿದ್ದರೂ ಯಶಸ್ಸು ಸಾಧಿಸುವಲ್ಲಿ ಅವರ ತುಡಿತ, ಪರಿಶ್ರಮ ಶ್ಲಾಘನೀಯ" ಎಂದು ಕೈಫ್ ಹೇಳಿದರು,(ಏಜೆನ್ಸೀಸ್).