

ನವದೆಹಲಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ವಿಷಯ ಶುಕ್ರವಾರ ಬಹಿರಂಗಗೊಂಡಿದೆ. ಇದರ ಹೊರತಾಗಿಯೂ ಅವರು ಮುಂಬರುವ ರಣಜಿ ಟ್ರೋಫಿ 2ನೇ ಹಂತದ ಟೂರ್ನಿಗೆ ದೆಹಲಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆದರೆ ಜ.23ರಿಂದ ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನವೆನಿಸಿದೆ.
ಕೊಹ್ಲಿ 2012ರಲ್ಲಿ ಕೊನೆಯದಾಗಿ ರಣಜಿಯಲ್ಲಿ ಆಡಿದ್ದರು. ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ದೆಹಲಿ ತಂಡದಲ್ಲಿ ಸ್ಥಾನ ಪಡೆದಿದ್ದು, 7 ವರ್ಷಗಳ ಬಳಿಕ ರಣಜಿಯಲ್ಲಿ ಆಡಲಿದ್ದಾರೆ. ಆದರೆ ಅವರು ನಾಯಕತ್ವ ನಿರಾಕರಿಸಿರುವುದರಿಂದ ಆಯುಷ್ ಬಡೋನಿ ನಾಯಕರಾಗಿ ಮುಂದುವರಿದಿದ್ದಾರೆ.