

ಮುಂಬೈ: ಹಾರ್ದಿಕ್ ಪಾಂಡ್ಯರನ್ನು ಅಪಹಾಸ್ಯ ಮಾಡುವ ಅಭಿಮಾನಿಗಳ ನಡೆಯನ್ನು ಖಂಡಿಸಿರುವ ವಿರಾಟ್ ಕೊಹ್ಲಿ, ಹಾರ್ದಿಕ್ ಪರ ಧ್ವನಿ ಎತ್ತುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ.
ರೋಹಿತ್ ಶರ್ಮರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಕಸಿದು ಹಾರ್ದಿಕ್ ಪಾಂಡ್ಯಗೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹಾರ್ದಿಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳು ನಡೆಯುತ್ತಲೇ ಇದೆ. ಸದ್ಯಕ್ಕೆ ಇದು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಗುಜರಾತ್ ಟೈಟಾನ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಬಹುತೇಕರು ಹಾರ್ದಿಕ್ ಹೆಸರನ್ನು ಕೂಗುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ಎಲ್ಇಡಿ ಪರದೆ ಮೇಲೆ ಹಾರ್ದಿಕ್ ಬಂದಾಗಲೆಲ್ಲ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲೂ ಇದು ಮರುಕಳಿಸಿತ್ತು. ಇದನೆಲ್ಲ ರೋಹಿತ್ ಅಭಿಮಾನಿಗಳು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ರೋಹಿತ್ ಕೂಡ ಮಧ್ಯಪ್ರವೇಶ ಮಾಡಿ ಈ ರೀತಿ ಅಪಹಾಸ್ಯ ಮಾಡಬೇಡಿ ಎಂದು ಮನವಿ ಮಾಡಿದ್ದರು.
ಯಾರೂ ಎಷ್ಟೇ ಹೇಳಿದರೂ ಮುಂಬೈ ತಂಡದ ಅಭಿಮಾನಿಗಳು ಮಾತ್ರ ಹಾರ್ದಿಕ್ರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುತ್ತಿಲ್ಲ. ನಿನ್ನೆ (ಏಪ್ರಿಲ್ 11) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲೂ ಹಾರ್ದಿಕ್ರನ್ನು ಅಪಹಾಸ್ಯ ಮಾಡಲಾಯಿತು. ಈ ಬಾರಿ ಹಾರ್ದಿಕ್ ಪರ ವಿರಾಟ್ ಕೊಹ್ಲಿ ಧ್ವನಿಗೂಡಿಸಿದರು.
ಅಭಿಮಾನಿಗಳಿಗೆ ಕೊಹ್ಲಿ ಪಾಠ ಕೊಹ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಬಾಟ್ ಮಾಡಲು ಕ್ರೀಸ್ಗೆ ಆಗಮಿಸಿದ್ದರು. ಈ ವೇಳೆ ಹಾರ್ದಿಕ್ರನ್ನು ನೋಡಿ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡಿದರು. ಇದನ್ನು ಗಮನಿಸಿದ ಕೊಹ್ಲಿ ತುಂಬಾ ಬೇಸರ ವ್ಯಕ್ತಪಡಿಸಿದರು. ಹಾರ್ದಿಕ್ರನ್ನು ಅಪಹಾಸ್ಯ ಮಾಡಬೇಡಿ. ಈ ರೀತಿ ಮಾಡುವ ಬದಲು ಚಪ್ಪಾಳೆ ತಟ್ಟಿ ಹುರಿದುಂಬಿಸಿ, ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬೆಂಬಲಿಸಿ ಎಂದು ಕೈ ಸನ್ನೆಯ ಮೂಲಕ ಅಭಿಮಾನಿಗಳ ಬಳಿ ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಅವರ ಕ್ರೀಡಾಸ್ಫೂರ್ತಿಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ನಾಯಕ ಫಾಪ್ ಡು ಪ್ಲೆಸಿಸ್ (61 ರನ್, 40 ಎಸೆತ, 4 ಬೌಡಂರಿ, 3 ಸಿಕ್ಸರ್), ರಜತ್ ಪಾಟಿದಾರ್ (50 ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್), ದಿನೇಶ್ ಕಾರ್ತಿಕ್ (53 ರನ್, 23 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಪೇರಿಸಿತ್ತು.
197 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡವು ಅರಂಭಿಕ ಇಶಾನ್ ಕಿಶನ್ (69 ರನ್, 34 ಎಸೆತ, 7 ಬೌಂಡರಿ, 5 ಸಿಕ್ಸರ್), ಸೂರ್ಯಕುಮಾರ್ ಯಾದವ್ (52 ರನ್, 19 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕಗಳ ಫಲವಾಗಿ 15.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್)