ಬೌಲಿಂಗ್​ನಲ್ಲೂ ಕೊಹ್ಲಿ ಕಮಾಲ್​: ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ದಾಖಲೆಯನ್ನು ಸರಿಗಟ್ಟಿದ ವಿರಾಟ್!

Virat Kohli
Published on

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ನ.12) ನೆದರ್ಲೆಂಡ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಅಪರೂಪಕ್ಕೆ ಒಮ್ಮೆ ಎಂಬಂತೆ ವಿರಾಟ್​ ಕೊಹ್ಲಿ ಬೌಲಿಂಗ್​​ ಮಾಡಿದರು. ಅಲ್ಲದೆ, ಒಂದು ವಿಕೆಟ್​ ಸಹ ಪಡೆದರು. 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಪಡೆದ ಕೊಹ್ಲಿ, ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಆ ಅಪರೂಪದ ದಾಖಲೆ ಯಾವುದೆಂದರೆ, ಕೊಹ್ಲಿ ಅವರು ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಅರ್ಧಶತಕ ಮತ್ತು ವಿಕೆಟ್ ಪಡೆದ ಏಕೈಕ ಕ್ರಿಕೆಟಿಗರು ಎಂಬ ಹೆಗ್ಗಳಿಕೆಗೆ ಕೊಹ್ಲಿ ಮತ್ತು ಸ್ಟೋಕ್ಸ್ ಪಾತ್ರರಾಗಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ 58 ಎಸೆತಕ್ಕೆ 51 ರನ್​ ಬಾರಿಸಿದರು. ಅಲ್ಲದೆ, 3 ಓವರ್​ ಬೌಲಿಂಗ್​ ಮಾಡಿದ ಕೊಹ್ಲಿ 13 ರನ್​ ನೀಡಿ 1 ವಿಕೆಟ್ ಪಡೆದರು.

2011ರಲ್ಲಿ ಕಾರ್ಡಿಫ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಮತ್ತು 2014ರಲ್ಲಿ ವೆಲ್ಲಿಂಗ್ಟನ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಎರಡು ಬಾರಿ ಇದೇ ಸಾಧನೆ ಮಾಡಿದ್ದರು. ಆದರೆ, ಈ ಎರಡೂ ಪಂದ್ಯಗಳಲ್ಲಿ ಭಾರತ ಸೋಲುಂಡಿತ್ತು. ವಾಸ್ತವವಾಗಿ ಕಾರ್ಡಿಫ್‌ನಲ್ಲಿ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ, ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಇಂಗ್ಲೆಂಡ್​ ಗೆಲುವು ಸಾಧಿಸಿತು.

ಪಂದ್ಯದ ವಿಚಾರಕ್ಕೆ ಬರುವುದಾದರೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ಪಡೆ 47.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 250 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ 160 ರನ್​ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆ ಹಾಕಿತು. ಬ್ಯಾಟ್​ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್​ ಇಂಡಿಯಾದ ಪ್ರತಿ ಬ್ಯಾಟರ್​ಗಳು ಸಹ ರನ್​ ಮಾರುತವನ್ನೇ ಸೃಷ್ಟಿಸಿದರು. ರೋಹಿತ್​ ಶರ್ಮ (61 ರನ್​, 54 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (51 ರನ್​, 32 ಎಸೆತ, 3 ಬೌಂಡರಿ, 4 ಸಿಕ್ಟರ್​) 100 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಸಹ ನೆದರ್ಲೆಂಡ್ಸ್​ ಬೌಲರ್​ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ಶ್ರೇಯಸ್​ ಅಯ್ಯರ್ ( ಅಜೇಯ 128 ರನ್​, 94 ಎಸೆತ, 10 ಬೌಂಡರಿ, 5 ಸಿಕ್ಸರ್​)​ ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕೆ.ಎಲ್​. ರಾಹುಲ್​ (102 ರನ್​, 64 ಎಸೆತ, 11 ಬೌಂಡರಿ, 4 ಸಿಕ್ಸರ್​) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್​ ಆಡಿದರು. ನೆದರ್ಲೆಂಡ್ಸ್​ ಬೌಲರ್​ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್​ಗಳ ಬೃಹತ್​ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್​ ಯಾದವ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು

ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ

ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net