

ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಪಂದ್ಯ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿದೆ. ಇನ್ನೂ ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಎಂದರೆ ಮೈದಾನದ ಹೊರಗೆ ಹಾಘೂ ಒಳಗೆ ಜಗಳವಿರುತ್ತದೆ. ಈ ಹಿಂದೆ ಅನೇಕ ಬಾರಿ ಭಾರತ ಹಾಗೂ ಪಕ್ ನಡುವಿನ ಪಂದ್ಯಗಳು ಕಗಳಕ್ಕೆ ಸಾಕ್ಷಿಯಾಗಿದ್ದು, ಇದೀಗ ಇದಕ್ಕೆ ತದ್ವಿರುದ್ಧವಾಗಿ ಘಟನೆಯೊಂದು ನಡೆದಿದ್ದು, ಎರಡೂ ತಂಡಗಳ ಆಟಗಾರರ ಮೈದಾನದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡವು ರನ್ ಮಷಿನ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) (100*ರನ್, 111 ಎಸೆತ, 7 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 51ನೇ ಶತಕದ ಬಲದಿಂದ ಗೆಲುವಿನ ನಗೆ ಬೀರಿತು. ಈ ಮೂಲಕ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು.
ಇನ್ನೂ ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದ್ದು, ವಿರಾಟ್ ಕೊಹ್ಲಿಯ (Virat Kohli) ನಡೆ ಎಲ್ಲರ ಮನ ಗೆಲ್ಲುತ್ತಿದೆ. ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಬ್ಯಾಟಿಂಗ್ ಮಾಡುವ ವೇಳೆ ಅವರ ಶೂ ಲೇಸ್ ಕಳಚಿತ್ತು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ನಸೀಮ್ ಬಳಿಗೆ ಬಂದು ಬಿಚ್ಚಿದ್ದ ಶೂ ಲೇಸ್ ಅನ್ನು ಸರಿಯಾಗಿ ಕಟ್ಟಿ ಅಲ್ಲಿಂದ ನಿರ್ಗಮಿಸಿದರು. ಇದೀಗ ವಿರಾಟ್ ಕೊಹ್ಲಿ, ನಸೀಮ್ ಅವರ ಶೂ ಲೇಸ್ ಕಟ್ಟುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನೂ ವಿರಾಟ್ ಕೊಹ್ಲಿಯ (Virat Kohli) ಈ ನಡೆ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದ್ದು, ಕೊಹ್ಲಿಯ ಕ್ರೀಡಾಮನೋಭಾವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಕ್ರೀಡಾ ಮನೋಭಾವದ ನಿಜವಾದ ಪ್ರತಿಬಿಂಬ ಎಂದು ಹಲವರು ಕರೆದರೆ, ಇನ್ನು ಕೆಲವರು ಮೈದಾನದಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ, ಕ್ರೀಡಾ ಮನೋಭಾವವು ಕ್ರಿಕೆಟ್‌ನ ಮೂಲ ಮೌಲ್ಯವಾಗಿ ಉಳಿದಿದೆ ಎಂದು ವೈರಲ್ ಆಗಿರುವ ಫೋಟೋಗೆ ಕಮೆಂಟ್ ಹಾಕಿದ್ದಾರೆ.