

ನವದೆಹಲಿ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ನಿರೀಕ್ಷೆಯಂತೆ ಟೀಮ್ ಇಂಡಿಯಾ ಜಯ ಸಾಧಿಸಿದ್ದು, ಅಭಿಮಾನಿಗಳಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಮೊದಲನೆಯದಾಗಿ ಪಂದ್ಯವನ್ನು ರೋಹಿತ್ ಪಡೆ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಎರಡನೇಯದ್ದು ಚೇಸ್ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ದಿಗ್ಗಜರ ಹೆಸರಿನಲ್ಲಿದ್ದ ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇನ್ನೂ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದ ಕುರಿತು ಮಾಜಿ ಹಾಗೂ ಹಾಲಿ ಆಟಗಾರರು ಹಾದಿಯಾಗಿ ಭವಿಷ್ಯ ನುಡಿದಿದ್ದರು. ಆದರೆ, ಪ್ರಮುಖವಾಗಿ ಗಮನ ಸೆಳೆದಿದ್ದು, ಮಹಾಕುಂಭ ಮೇಳದಲ್ಲಿ ವೈರಲ್ ಆಗಿದ್ದ ಐಐಟಿ ಬಾಬಾ (IIT Baba) ಅಭಯ್ ಸಿಂಗ್ ನುಡಿದಿದ್ದ ಭವಿಷ್ಯ ಎಂದರೆ ತಪ್ಪಾಗಲಾರದು. ವಿವಾದಕ್ಕೆ ಕಾರಣವಾಗಿದ್ದ ಭವಿಷ್ಯವಾಣಿಯು ಇದೀಗ ಸುಳ್ಳಾಗಿದ್ದು, ಐಐಟಿ ಬಾಬಾನನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಕದನ ನಡೆಯುವುದಕ್ಕೆ ಕೆಲವು ದಿನಗಳ ಮುನ್ನ ಐಐಟಿ ಬಾಬಾ (IIT Baba) ಖಾಸಗಿ ಯುಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಈ ಉಭಯ ತಂಡಗಳ ನಡುವಿನ ಕದನದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಏನಾಗಿತ್ತು ಅಂದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಶ್ರೇಷ್ಠ ಪಂದ್ಯವನ್ನು ಪಾಕಿಸ್ತಾನ ತಂಡ ಗೆಲ್ಲುತ್ತದೆ. ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಎಷ್ಟೇ ಪ್ರಯತ್ನಿಸಿದರೂ ಭಾರತ ಗೆಲ್ಲುವುದಿಲ್ಲ ಎಂದು ಐಐಟಿ ಬಾಬಾ ಹೇಳಿದ್ದರು.
ಆದರೆ, ಐಐಟಿ ಬಾಬಾ (IIT Baba) ನುಡಿದಿರುವ ಭವಿಷ್ಯ ಸುಳ್ಳಾಗಿದ್ದು, ಭಾರತ ತಂಡ ಭರ್ಜರಿ ಜಯ ಕಂಡಿದೆ. ವಿರಾಟ್ ಕೊಹ್ಲಿ ಸೇರಿದಂತೆ ಇತರ ಆಟಗಾರರು ಉತ್ತಮ್ಮ ಪ್ರದರ್ಶನವನ್ನು ನೀಡಿದ್ದು, ಭಾರತದ ವಿರುದ್ಧ ಪಂದ್ಯದ ಫಲಿತಾಂಶ ನೀಡಿದ್ದ ಐಐಟಿ ಬಾಬಾರನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಂಬಂಧಿಸಿದ ಟ್ರೋಲ್ಗಳು ವೈರಲ್ ಆಗಿದ್ದು, ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.