ಇನ್​ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ, ವಿಶ್ವದ ಮೊದಲ ಕ್ರಿಕೆಟರ್ ದಾಖಲೆ ಬರೆದ ಕೊಹ್ಲಿ..!

kohli web
Published on

ನವದೆಹಲಿ: ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಈ ದಾಖಲೆ ಕ್ರಿಕೆಟ್​ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸಾಮಾಜಿಕ ಜಾಲತಾಣ ಕುರಿತಾಗಿದೆ.

ಏನಪ್ಪಾ ಆ ದಾಖಲೆ ಎನ್ನುವುದಾದರೆ ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್​ ಫಾಲೋವರ್ಸ್​ ಹೊಂದಿದ ಮೊದಲ ಭಾರತೀಯನೆಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಸೋಮವಾರ ಕೊಹ್ಲಿ ಅವರ ಫಾಲೋವರ್ಸ್​ ಸಂಖ್ಯೆ 100 ಮಿಲಿಯನ್​ ದಾಟಿದೆ.

ಮೊದಲ ಭಾರತೀಯ ಮಾತ್ರವಲ್ಲದೆ, ಈ ಸಾಧನೆ ಮಾಡಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟರ್​ ಸಹ ಹೌದು. ಕೊಹ್ಲಿಯ ಸಾಧನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಅಭಿನಂದಿಸಿದ್ದು, ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಕ್ರಿಶ್ಚಿಯಾನೋ ರೊನಾಲ್ಡೋ (266 ಮಿಲಿಯನ್​), ಲಿಯೋನೆಲ್​ ಮೆಸ್ಸಿ (187 ಮಿಲಿಯನ್​) ಮತ್ತು ನೆಯ್ಮಾರ್​ (147 ಮಿಲಿಯನ್​) ಸೇರಿದಂತೆ ಇತರೆ ಸೆಲೆಬ್ರಿಟಿಗಳ ಸಾಲಿಗೆ ಕೊಹ್ಲಿ ಅವರನ್ನು ಸ್ವಾಗತಿಸಿದೆ.

ಕೊಹ್ಲಿಯನ್ನು ನಂತರ ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಭಾರತೀಯರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 60 ಮಿಲಿಯನ್​ ಫಾಲೋವರ್ಸ್​ನೊಂದಿಗೆ ಸ್ಥಾನ ಪಡೆದಿದ್ದಾರೆ.

ಇನ್​ಸ್ಟಾಗ್ರಾಂ ಹೊರತುಪಡಿಸಿ ಕೊಹ್ಲಿ ಅವರು ಇತರೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ವಿಟರ್​ನಲ್ಲಿ 40.8 ಮಿಲಿಯನ್​ ಮತ್ತು ಫೇಸ್​ಬುಕ್​ನಲ್ಲಿ 36 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ.

ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ ಕೊಹ್ಲಿ ನಾಯಕತ್ವದ ಟೀಮ್​ ಇಂಡಿಯಾ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಆಡುತ್ತಿದೆ. ಮಾರ್ಚ್​ ನಾಲ್ಕರಿಂದ ನಾಲ್ಕನೇ ಮತ್ತು ಅಂತಿಮ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಟೆಸ್ಟ್ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯವನ್ನು ಭಾರತ ಗೆಲ್ಲಬೇಕಿದೆ ಅಥವಾ ಡ್ರಾ ಮಾಡಿಕೊಳ್ಳಬೇಕಿದೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net