More

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್‌ಗೂ ಸ್ಪಿನ್ ಪಿಚ್ ನಿರೀಕ್ಷೆ

    ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಪಿಚ್‌ನಲ್ಲೇ ಆಡಲಾಗಿತ್ತು. ಅದರ ಬಳಿಕ ಅಹಮದಾಬಾದ್‌ನಲ್ಲಿ ನಡೆದ ಸರಣಿಯ 3ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ ಪಿಚ್ ಅಂತೂ ಸ್ಪಿನ್ನರ್‌ಗಳ ಸ್ವರ್ಗದಂತಿತ್ತು. ಇದರ ಸಂಪೂರ್ಣ ಲಾಭವೆತ್ತಿದ ಭಾರತೀಯ ಸ್ಪಿನ್ನರ್‌ಗಳ ಮಾರಕ ದಾಳಿಯಿಂದಾಗಿ ಪಂದ್ಯ ಮೂರೇ ದಿನಗಳಲ್ಲಿ ಮುಕ್ತಾಯಗೊಂಡಿತ್ತು. ಇದರ ನಡುವೆಯೂ ಭಾರತ, ಐಸಿಸಿಯ ಕೆಂಗಣ್ಣಿನಿಂದ ಪಾರಾಗಿತ್ತು. ಇದೀಗ ಗುರುವಾರದಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲೇ ನಡೆಯಲಿರುವ 4ನೇ ಹಾಗೂ ಅಂತಿಮ ಟೆಸ್ಟ್‌ಗೂ ಸ್ಪಿನ್ ಸ್ನೇಹಿ ಪಿಚ್ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಬಾರಿ ಪಂದ್ಯ ಕನಿಷ್ಠ ಮೂರು ದಿನಗಳಾದರೂ ಸಾಗುವ ನಿರೀಕ್ಷೆ ಇಡಬಹುದು ಎನ್ನಲಾಗಿದೆ.

    ಅಂತಿಮ ಟೆಸ್ಟ್‌ಗೆ ಸಿದ್ಧಗೊಳ್ಳುತ್ತಿರುವ ಪಿಚ್ ಭಾನುವಾರದವರೆಗೆ ಹಚ್ಚ ಹಸಿರಾಗಿಯೇ ಇತ್ತು. ಆದರೆ ಸೋಮವಾರದ ವೇಳೆಗೆ ಸ್ವಲ್ಪ ಮಟ್ಟಿನ ಹಸಿರು ಮಾಯವಾಗಿದೆ. ಅಂದರೆ ಹಸಿರು ಹುಲ್ಲು ಸ್ವಲ್ಪಮಟ್ಟಿಗೆ ಕತ್ತರಿಸಲ್ಪಟ್ಟಿದೆ. ಪಂದ್ಯಕ್ಕೆ ಇನ್ನೂ 3 ದಿನಗಳು ಇರುವುದರಿಂದ ಇನ್ನಷ್ಟು ಹುಲ್ಲು ಮಾಯವಾಗಬಹುದು. ಆಗ ಪಿಚ್ ಸಂಪೂರ್ಣ ಸ್ಪಿನ್ ಸ್ನೇಹಿಯಾಗಿ ಬದಲಾಗಲಿದೆ.

    3ನೇ ಟೆಸ್ಟ್ ಪಂದ್ಯದ ಬಳಿಕ ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಭಾರತೀಯರಷ್ಟೇ ಅಲ್ಲದೆ ಕೆಲ ವಿದೇಶಿ ಮಾಜಿ ಕ್ರಿಕೆಟಿಗರಿಂದಲೂ ಸ್ಪಿನ್ ಸ್ನೇಹಿ ಪಿಚ್‌ಗೆ ಬೆಂಬಲ ವ್ಯಕ್ತವಾಗಿದೆ. ‘ವೇಗದ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ತಂಡಗಳು 47-60 ರನ್‌ಗೆ ಆಲೌಟ್ ಆದಾಗಲೂ ಯಾರೂ ಏನನ್ನೂ ಹೇಳುವುದಿಲ್ಲ. ಆದರೆ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆಂಡು ತಿರುವು ಪಡೆದುಕೊಳ್ಳಲು ಆರಂಭಿಸಿದಾಗ ಬೊಬ್ಬೆ ಹೊಡೆಯುತ್ತಾರೆ’ ಎಂದು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲ್ಯಾನ್ ಅಹಮದಾಬಾದ್‌ನ ಸ್ಪಿನ್ ಪಿಚ್ ಬಗ್ಗೆ ಸಮರ್ಥಿಸಿಕೊಂಡಿದ್ದರು.

    ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ಕೂಡ ಸ್ಪಿನ್ ಪಿಚ್ ನಿರ್ಮಿಸುವ ಭಾರತದ ನಿರ್ಧಾರವನ್ನು ಬೆಂಬಲಿಸಿದ್ದು, ‘ಭಾರತ ಸ್ಪಿನ್ ಪಿಚ್‌ಗಳ ನೆಲ. ಅಲ್ಲಿಗೆ ಹೋಗುವವರು ಅದರಲ್ಲಿ ಆಡಲು ಸಿದ್ಧವಿರಬೇಕು. ಟೆಸ್ಟ್ ಕ್ರಿಕೆಟ್ ಎಂದರೆ ಬರೀ ವೇಗದ ಬೌಲಿಂಗ್ ಪಿಚ್‌ಗಳಲ್ಲಿ ಆಡುವುದಲ್ಲ. ಬ್ಯಾಟ್ಸ್‌ಮನ್‌ಗಳು ಸ್ಪಿನ್ ಪಿಚ್‌ಗಳಲ್ಲೂ ಆಡುವ ಸವಾಲನ್ನೂ ಎದುರಿಸಬೇಕು. ಇಂಗ್ಲೆಂಡ್ ತಂಡದ ಭಾರತದಲ್ಲಿನ ಈ ಸವಾಲಿಗೆ ಸರಿಯಾದ ಸಿದ್ಧತೆ ನಡೆಸದೆ ಸೋತಿದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಟೆನಿಸ್ ಕೋರ್ಟ್‌ಗೆ ಸಾನಿಯಾ ಮಿರ್ಜಾ ಗೆಲುವಿನ ಪುನರಾಗಮನ

    ಉಮೇಶ್, ಕುಲದೀಪ್ ಇನ್?
    ಜಸ್‌ಪ್ರೀತ್ ಬುಮ್ರಾ ಅಂತಿಮ ಟೆಸ್ಟ್‌ಗೆ ಅಲಭ್ಯರಾಗಿರುವುದರಿಂದ ಭಾರತ ತಂಡ ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಳ್ಳಲು ಸಾಧ್ಯವಾಗದು. ಹೀಗಾಗಿ ಬುಮ್ರಾ ಸ್ಥಾನವನ್ನು ಉಮೇಶ್ ಯಾದವ್ ತುಂಬುವ ನಿರೀಕ್ಷೆ ಇದೆ. ಇದರೊಂದಿಗೆ ಕುಲದೀಪ್ ಯಾದವ್ ಕೂಡ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಂತಿಮ ಟೆಸ್ಟ್‌ಗೂ ಸ್ಪಿನ್ ಸ್ನೇಹಿ ಪಿಚ್ ಇರಲಿರುವುದರಿಂದ, ವಾಷಿಂಗ್ಟನ್ ಸುಂದರ್ ಜಾಗಕ್ಕೆ ಕುಲದೀಪ್ ಸೇರ್ಪಡೆಯಾಗುವ ನಿರೀಕ್ಷೆ ಇದೆ.

    ಭಾರತ ತಂಡ ಕಠಿಣ ಅಭ್ಯಾಸ
    ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ಗೆ ಪೂರ್ವಭಾವಿಯಾಗಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಸಹಿತ ಭಾರತ ತಂಡದ ಪ್ರಮುಖ ಆಟಗಾರರು ಸೋಮವಾರ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಇವರ ಅಭ್ಯಾಸದ ವಿಡಿಯೋವನ್ನು ಬಿಸಿಸಿಐ, ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಮುಖ್ಯ ಕೋಚ್ ರವಿಶಾಸಿ ಅವರು ರೋಹಿತ್-ಕೊಹ್ಲಿ ಜತೆಗೆ ಚರ್ಚಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಭಾನುವಾರವೂ ಭಾರತ ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ಭಾಗಿಯಾಗಿದ್ದರು. 3ನೇ ಟೆಸ್ಟ್ ಪಂದ್ಯವನ್ನು ಪಿಂಕ್ ಚೆಂಡಿನಲ್ಲಿ ಆಡಿದ್ದ ಕಾರಣ ಆಟಗಾರರು ಈಗ ಮತ್ತೆ ಕೆಂಪು ಚೆಂಡಿಗೆ ಹೊಂದಿಕೊಳ್ಳಬೇಕಾಗಿದೆ. ಭಾರತ ಸದ್ಯ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ದೃಷ್ಟಿಯಿಂದ ಅಂತಿಮ ಟೆಸ್ಟ್‌ನಲ್ಲಿ ಕನಿಷ್ಠ ಡ್ರಾ ಮಾಡಿಕೊಳ್ಳುವುದು ಅಗತ್ಯವಾಗಿದೆ. ಭಾರತ ಸೋತರೆ ಆಸೀಸ್ ಫೈನಲ್‌ಗೇರಲಿದೆ.

    ಏಕದಿನ ಸರಣಿಯಿಂದ 8 ಆಟಗಾರರಿಗೆ ರೆಸ್ಟ್?
    ಕಳೆದ ವರ್ಷದ ಐಪಿಎಲ್ ಆರಂಭದೊಂದಲೂ ಬಯೋ-ಬಬಲ್ ವಾತಾವರಣದಲ್ಲೇ ಇರುವ ಭಾರತ ತಂಡದ 10 ಆಟಗಾರರ ಪೈಕಿ 8 ಆಟಗಾರರಿಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಿಂದ ವಿಶ್ರಾಂತಿ ಲಭಿಸುವ ಸಾಧ್ಯತೆ ಇದೆ. ಈ ಮೂಲಕ ಏಪ್ರಿಲ್ 2ನೇ ವಾರದಲ್ಲಿ ಆರಂಭವಾಗಲಿರುವ ಐಪಿಎಲ್ 14ನೇ ಆವೃತ್ತಿಗೆ ಮುನ್ನ ಈ 8 ಆಟಗಾರರಿಗೆ ಸೂಕ್ತ ಬಿಡುವು ನೀಡಲಾಗುವುದು. ವೇಗಿ ಜಸ್‌ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದಾಗಿ ಈಗಾಗಲೆ ಟೆಸ್ಟ್ ತಂಡದಿಂದ ಬಿಡುಗಡೆಯಾಗಿದ್ದು, ಟಿ20 ತಂಡದಿಂದಲೂ ವಿಶ್ರಾಂತಿ ನೀಡಲಾಗಿದೆ. ಹೊರಗಿನ ವ್ಯಕ್ತಿಗಳೊಂದಿಗೆ ಬೆರೆಯಲು ಅವಕಾಶವಿಲ್ಲದ ಬಯೋ-ಬಬಲ್‌ನಲ್ಲಿನ ಬದುಕು ಕ್ರಿಕೆಟಿಗರಿಗೆ ಹಲವು ರೀತಿಯ ಮಾನಸಿಕ ಸವಾಲುಗಳನ್ನು ತಂದೊಡ್ಡುತ್ತವೆ. ಇದರಿಂದಾಗಿ ಟಿ20 ಸರಣಿಗೆ ತಂಡ ಆಯ್ಕೆಗೆ ಮುನ್ನ ಆಟಗಾರರಿಗೆ ವಿಶ್ರಾಂತಿಯ ಆಯ್ಕೆಯನ್ನು ನೀಡಲಾಗಿತ್ತು. ಈ ಪೈಕಿ ಬುಮ್ರಾ ಮತ್ತು ಮೊಹಮದ್ ಸಿರಾಜ್ ಟಿ20 ತಂಡದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಮಾರ್ಚ್ 23, 26, 28ರಂದು ಪುಣೆಯಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿರುವ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮ, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಮುಂತಾದವರು ಸೇರಿದ್ದಾರೆ ಎನ್ನಲಾಗಿದೆ. ಐಪಿಎಲ್ ಬೆನ್ನಲ್ಲೇ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆಡಬೇಕಾಗಿದ್ದು, ಅದೇ ವೇಳೆ ಇಂಗ್ಲೆಂಡ್‌ನಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲೂ ಆಡಲಿದೆ. ಹೀಗಾಗಿ ಈ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವುದು ಅಗತ್ಯವಾಗಿದೆ.

    ಚೆನ್ನೈ ಸೂಪರ್‌ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!

    ಕೆಕೆಆರ್​ ಸ್ಪಿನ್ನರ್​ ವರುಣ್ ಚಕ್ರವರ್ತಿಗೆ ಈ ಸಲವೂ ಟೀಮ್ ಇಂಡಿಯಾ ಪರ ಆಡುವ ಅದೃಷ್ಟವಿಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts