ಚೆನ್ನೈ ಸೂಪರ್‌ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!

uthappa web
Published on

ಬೆಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಅವರಂಥ ಯುವ ಬ್ಯಾಟ್ಸ್‌ಮನ್‌ಗಳು ಮಿಂಚಲಾರಂಭಿಸಿದಾಗ ಕೊಡಗಿನ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅವಕಾಶವನ್ನು ಅರಸಿ ಬೇರೆ ರಾಜ್ಯ ತಂಡಗಳಿಗೆ ವಲಸೆ ಹೋಗಿದ್ದರು. ಮೊದಲಿಗೆ ಸೌರಾಷ್ಟ್ರ ತಂಡ ಸೇರಿದ ಉತ್ತಪ್ಪಗೆ ಅಲ್ಲೂ ಹೊಂದಾಣಿಕೆ ಆಗಲಿಲ್ಲ. ಬಳಿಕ ವರ್ಷದ ಹಿಂದೆ ಕೇರಳಕ್ಕೆ ವಲಸೆ ಹೋದರು. ಅಲ್ಲೂ ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅವರ ನಿರ್ವಹಣೆ ಸಾಧಾರಣವಾಗಿತ್ತು. ಈ ನಡುವೆ ಐಪಿಎಲ್‌ನಲ್ಲೂ ಕೆಕೆಆರ್ ತಂಡದಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ, ಕಳೆದ ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿಯೂ ಉತ್ತಪ್ಪ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿರಲಿಲ್ಲ. ಇನ್ನೇನು ಉತ್ತಪ್ಪ ಕ್ರಿಕೆಟ್ ಜೀವನ ಅಂತ್ಯ ಕಂಡಿತು ಎನ್ನುವಷ್ಟರಲ್ಲಿ ಅವರು ಪುಟಿದೆದ್ದು ಬಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಅವರ ವರ್ಗಾವಣೆ!

ಹೌದು, ಇತ್ತೀಚೆಗೆ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ತಂಡಗಳಿಗೆ ಆಟಗಾರರ ವಿನಿಮಯಕ್ಕೆ ಅವಕಾಶ ನೀಡಿದಾಗ, ಚೆನ್ನೈ ಸೂಪರ್‌ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದಿಂದ ರಾಬಿನ್ ಉತ್ತಪ್ಪ ಅವರನ್ನು ತನ್ನಲ್ಲಿಗೆ ವರ್ಗಾವಣೆ ಮಾಡಿಕೊಂಡಿತ್ತು. ಕೇದಾರ್ ಜಾಧವ್ ಅವರನ್ನು ಕೈಬಿಟ್ಟ ಮತ್ತು ಶೇನ್ ವ್ಯಾಟ್ಸನ್ ನಿವೃತ್ತಿಯಾದ ಕಾರಣದಿಂದಾಗಿ ಸಿಎಸ್‌ಕೆ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್ ಒಬ್ಬರ ಅಗತ್ಯವಿತ್ತು. ಆಗ ಧೋನಿ ಪಡೆ ಬಲೆ ಬೀಸಿದ್ದೇ ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ. ಟೀಮ್ ಇಂಡಿಯಾದಲ್ಲಿ ಈ ಹಿಂದೆ ರಾಬಿನ್ ಉತ್ತಪ್ಪ ಜತೆಗೆ ಆಡಿದ್ದ ಧೋನಿ ಆ ಸಮಯದಲ್ಲಿ ಉತ್ತಪ್ಪ ಜತೆಗೆ ಉತ್ತಮ ಗೆಳೆತನವನ್ನೂ ಹೊಂದಿದ್ದರು. ಹೀಗಾಗಿ ಉತ್ತಪ್ಪ ಸಾಮರ್ಥ್ಯವನ್ನು ಅರಿತಿದ್ದ ಧೋನಿ, ಉತ್ತಪ್ಪ ಅವರನ್ನು ಸಿಎಸ್‌ಕೆ ಸೆಳೆದುಕೊಂಡಿದ್ದರಲ್ಲಿ ಅಚ್ಚರಿ ಇರಲಿಲ್ಲ. ಗೆಳೆಯನ ನಂಬಿಕೆಯನ್ನು ಈಗ ಭರ್ಜರಿಯಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಪ್ಪ ಹೆಜ್ಜೆ ಇಡುತ್ತಿದ್ದಾರೆ.

ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ರಾಬಿನ್ ಉತ್ತಪ್ಪ ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಈ ಮೂಲಕ ಮುಂಬರುವ ಐಪಿಎಲ್‌ನಲ್ಲಿ ತಾನೆಷ್ಟು ಅಪಾಯಕಾರಿ ಆಗಬಲ್ಲೆ ಎಂದು ಎಲ್ಲ ಎದುರಾಳಿ ತಂಡಗಳಿಗೆ ಎಚ್ಚರಿಕೆ ರವಾನಿಸುತ್ತಿದ್ದಾರೆ. ಜತೆಗೆ ಸಿಎಸ್‌ಕೆ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ, ಸಂತಸ, ವಿಶ್ವಾಸವನ್ನು ತಂದಿದ್ದಾರೆ. 'ನನಗೆ ವಿಷಲ್​ (ಸೀಟಿ) ಹೊಡೆಯಲು ಗೊತ್ತಿಲ್ಲ. ಆದರೆ ಜನರು ವಿಷಲ್​ ಹೊಡೆಯುವಂತೆ ಮಾಡಬಲ್ಲೆ' ಎಂದು ರಾಬಿನ್​ ಉತ್ತಪ್ಪ ಇತ್ತೀಚೆಗೆ ಸಿಎಸ್​ಕೆ ಅಭಿಮಾನಿಗಳಿಗೆ ಹೇಳಿದ್ದರು. ಇದೀಗ ಅವರ ಆಟವೂ ಅದೇ ರೀತಿಯಾಗಿ ಸಾಗಿದೆ.

ಓವರ್‌ಗೆ 5 ಸಿಕ್ಸರ್ ಸಿಡಿಸಿದ ಉತ್ತಪ್ಪ

ಭರ್ಜರಿ ಫಾರ್ಮ್ ಮುಂದುವರಿಸಿರುವ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (87*ರನ್, 32 ಎಸೆತ, 4 ಬೌಂಡರಿ, 10 ಸಿಕ್ಸರ್) ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಬೆಂಗಳೂರು ಹೊರವಲಯದ ಆಲೂರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಸ್. ಶ್ರೀಶಾಂತ್ (30ಕ್ಕೆ 4) ಬಿಹಾರ ತಂಡವನ್ನು 148 ರನ್‌ಗೆ ನಿಯಂತ್ರಿಸಿದರು. ಪ್ರತಿಯಾಗಿ ಕೇರಳ ತಂಡ, ರಾಬಿನ್ ಉತ್ತಪ್ಪ ಹಾಗೂ ಸಂಜು ಸ್ಯಾಮ್ಸನ್ (24*ರನ್, 9 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 8.5 ಓವರ್‌ಗಳಲ್ಲೇ 1 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಜಯಿಸಿತು. 35 ವರ್ಷದ ಉತ್ತಪ್ಪ ಪಂದ್ಯದಲ್ಲಿ ಅನುಜ್ ರಾಜ್‌ರ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ಆರ್ಭಟಿಸಿದರು. ಉತ್ತಪ್ಪ ಉತ್ತಮ ನಿರ್ವಹಣೆಯಿಂದ ಕೇರಳ ತಂಡ ರನ್‌ರೇಟ್ ಸುಧಾರಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೂ, ಕ್ವಾರ್ಟರ್​ಫೈನಲ್ ಆಸೆ ಜೀವಂತ ಉಳಿಸಿಕೊಂಡಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ಬಾರಿಸಿರುವ ಉತ್ತಪ್ಪ, 5 ಪಂದ್ಯಗಳಲ್ಲಿ 93.75ರ ಸರಾಸರಿ ಮತ್ತು 135.37ರ ಸ್ಟ್ರೈಕ್‌ರೇಟ್‌ನಲ್ಲಿ 375 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್‌ಸ್ಕೋರರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಯುವ ಆಟಗಾರರ ಅಬ್ಬರದ ನಡುವೆ ತಮ್ಮ ಅನುಭವವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದಕ್ಕೆ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಉತ್ತಪ್ಪ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಲ್ಲಿ 5 ಪಂದ್ಯಗಳಲ್ಲಿ ಗರಿಷ್ಠ 91 ರನ್ ಸಹಿತ 161 ರನ್ ಬಾರಿಸಿದ್ದರು. ಉತ್ತಪ್ಪ ಅವರ ಬ್ಯಾಟಿಂಗ್ ಲಯದಲ್ಲಿ ಈ ರೀತಿಯ ಬದಲಾವಣೆಯೊಂದು ಬಂದಿರುವುದು ಅವರು ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ವರ್ಗಾವಣೆಗೊಂಡ ಬಳಿಕ ಎಂಬುದು ವಿಶೇಷ. ಹಳದಿ ಜೆರ್ಸಿ ತೊಟ್ಟು ಮೈದಾನಕ್ಕಿಳಿಯುವ ಮುನ್ನವೇ ಅವರು ಈ ರೀತಿ ಅಬ್ಬರಿಸುತ್ತಿರುವುದು ಸಿಎಸ್‌ಕೆ ಅಭಿಮಾನಿಗಳಲ್ಲಿ ಐಪಿಎಲ್ ಬಗ್ಗೆ ಇನ್ನಷ್ಟು ಕಾತರವನ್ನು ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net